ಕಾಬೂಲ್, ಡಿ 27 (DaijiworldNews/MS): ಅಫ್ಘಾನಿಸ್ತಾನದಲ್ಲಿದ್ದ ಎರಡು ಚುನಾವಣಾ ಆಯೋಗಗಳನ್ನು ಮತ್ತು ಶಾಂತಿ ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವಾಲಯಗಳನ್ನು ತಾಲಿಬಾನ್ ಸರ್ಕಾರ ವಿಸರ್ಜಿಸಿದೆ.
ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತದ ಸರ್ಕಾರದ ಉಪ ವಕ್ತಾರ ಬಿಲಾಲ್ ಕರಿಮಿ, "ದೇಶದ ಸ್ವತಂತ್ರ ಚುನಾವಣಾ ಆಯೋಗ ಮತ್ತು ಚುನಾವಣಾ ದೂರು ಆಯೋಗವನ್ನು ವಿಸರ್ಜಿಸಲಾಗಿದೆ" ಎಂದು ಭಾನುವಾರ ತಿಳಿಸಿದ್ದಾರೆ.
ಅಫ್ಘಾನಿಸ್ತಾನದ ಪ್ರಸ್ತುತ ಪರಿಸ್ಥಿತಿಗೆ ಇವು ಅನಗತ್ಯ ಸಂಸ್ಥೆಗಳು ಎಂದಿರುವ ಬಿಲಾಲ್ ಕರಿಮಿ, ಒಂದುವೇಳೆ ಭವಿಷ್ಯದಲ್ಲಿ ಆಯೋಗಗಳ ಅಗತ್ಯವಿದ್ದಲ್ಲಿ, ತಾಲಿಬಾನ್ ಸರ್ಕಾರವು ಅವುಗಳನ್ನು ಪುನರುಜ್ಜೀವನಗೊಳಿಸಬಹುದು ಎಂದು ಹೇಳಿದ್ದಾರೆ.
ದೇಶದ ಆಡಳಿತ, ಅಧ್ಯಕ್ಷರ ಆಯ್ಕೆ, ಸಂಸತ್ ಮತ್ತು ಪ್ರಾಂತೀಯ ಚುನಾವಣೆ ಸೇರಿದಂತೆ ದೇಶದ ಎಲ್ಲಾ ರೀತಿಯ ಚುನಾವಣೆಗಳನ್ನು ನಿರ್ವಹಿಸಲು ಮತ್ತು ಮೇಲ್ವಿಚಾರಣೆ ಮಾಡಲು ಚುನಾವಣಾ ಆಯೋಗಗಳು ಅತ್ಯಗತ್ಯವಾದವುಗಳಾಗಿವೆ. ಅಫ್ಗಾನಿಸ್ತಾನದ ಆಡಳಿತವನ್ನು ಆಗಸ್ಟ್ನಲ್ಲಿ ಹಿಡಿತಕ್ಕೆ ಪಡೆದಿರುವ ತಾಲಿಬಾನ್, ಈ ಬಾರಿ ಉದಾರವಾದಿ ಆಡಳಿತ ನೀಡುವುದಾಗಿ ಭರವಸೆ ನೀಡಿತ್ತು. ತಾಲಿಬಾನ್ 20 ವರ್ಷಗಳ ಹಿಂದೆ (1996–2001) ಆಡಳಿತದಲ್ಲಿದ್ದಾಗ ಹಲವು ಕಠಿಣ ನೀತಿಗಳನ್ನು ಹೇರಲಾಗಿತ್ತು. ಹೀಗಾಗಿ ತಾಲಿಬಾನ್ನ 'ಉತ್ತಮ ಆಡಳಿತದ ಭರವಸೆ'ಯ ಹೊರತಾಗಿಯೂ, ಸರ್ಕಾರಕ್ಕೆ ಔಪಚಾರಿಕ ಮನ್ನಣೆಯನ್ನು ವಿಸ್ತರಿಸಲು ಅಂತರರಾಷ್ಟ್ರೀಯ ಸಮುದಾಯ ಹಿಂದೇಟು ಹಾಕುತ್ತಿದೆ.