ದುಬೈ, ಡಿ. 28 (DaijiworldNews/HR): ಬಹುಕಾಲದಿಂದ ಈಡೇರದ ಬೇಡಿಕೆಗಳ ಬಗ್ಗೆ ರಾಜ್ಯ ಸರ್ಕಾರದ ಗಮನ ಸೆಳೆಯಲು 30ಕ್ಕೂ ಹೆಚ್ಚಿನ ದೇಶದಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರು ಪ್ರತಿನಿಧಿಸುವ ನೂರಕ್ಕೂ ಹೆಚ್ಚಿನ ಕನ್ನಡ ಪರ ಸಂಘಟನೆಗಳ ಸಹಯೋಗದಲ್ಲಿ ಒಗ್ಗಟ್ಟಾಗಿ ಟ್ವಿಟರ್ ಮತ್ತು ಈಮೇಲ್ ಅಭಿಯಾನ ನಡೆಸಲು ಮುಂದಾಗಿದ್ದು, ಜನವರಿ 2ರಂದು ಮಧ್ಯಾಹ್ನ ಭಾರತೀಯ ಕಾಲಮಾನ ಸಂಜೆ 4ಗಂಟೆಗೆ ಟ್ವಿಟರ್ ಅಭಿಯಾನಕ್ಕೆ ಏಕಕಾಲದಲ್ಲಿ ಚಾಲನೆ ನೀಡಿ ಸರಣಿ ಮನವಿಗಳನ್ನು, ಬೇಡಿಕೆಗಳನ್ನು ಇಡಲಿದ್ದಾರೆ.
ತಮ್ಮ ಕುಟುಂಬದ ಜವಾಬ್ದಾರಿ ಹೊತ್ತು ಉದ್ಯೋಗ ಹರಸಿ ವಿದೇಶಕ್ಕೆ ತೆರಳಿದರೂ ಹುಟ್ಟೂರು ಮತ್ತು ರಾಜ್ಯದ ಆಗುಹೋಗುಗಳ ಬಗ್ಗೆ ಅತಿ ಹೆಚ್ಚು ಕಾಳಜಿ ತೋರಿಸುವವರು ಅನಿವಾಸಿ ಕನ್ನಡಿಗರು, ರಾಜ್ಯದಲ್ಲಿ ನೆರೆ ಬಂದರೂ, ಬರ ಬಂದರೂ, ಯಾವುದೇ ಸಂಕಷ್ಟ ಬಂದೊದಗಿದರೂ ತತಕ್ಷಣ ಸಹಾಯಹಸ್ತ ಚಾಚುವವರೇ ಲಕ್ಷಾಂತರ ಅನಿವಾಸಿಗಳು, ಆದರೆ ಆಶ್ಚರ್ಯವೆಂದರೆ ಈ ಅನಿವಾಸಿಗಳ ಬೇಡಿಕೆಗಳಿಗೆ ಸ್ಪಂದಿಸುವವರೇ ಇಲ್ಲ, ಬಹುಕಾಲದಿಂದ ಅವರ ಬೇಡಿಕೆಗಳ ಪಟ್ಟಿ ಬೆಳೆಯುತ್ತಾ ಇದ್ದರೂ ಅಧಿಕಾರಕ್ಕೆ ಬಂದ ಯಾವುದೇ ಸರ್ಕಾರ ಈ ಬಗ್ಗೆ ಗಮನ ಹರಿಸಿಲ್ಲ, ಕೊರೋನ ಸಂಕಷ್ಟ ಸಂದರ್ಭದಲ್ಲಂತೂ ಇವರ ಗೋಳನ್ನು ಕೇಳುವವರೇ ಇರಲಿಲ್ಲ, ಇದೇ ಕಾರಣಕ್ಕೆ ಇದೀಗ ಅನಿವಾಸಿಗಳು ಒಗ್ಗಟ್ಟಾಗಿ ತಮ್ಮ ಬೇಡಿಕೆಗಳ ಮನವಿ ಸಲ್ಲಿಸಲೆಂದೇ ಒಂದು ದಿನವನ್ನು ಆಚರಿಸಲು ನಿರ್ಧರಿಸಿದ್ದು, ಅಭಿಯಾನದ ವಿಶಿಷ್ಟ ರೀತಿಯಲ್ಲಿ ಕರ್ನಾಟಕ ಸರ್ಕಾರದ ಕದತಟ್ಟಿ ಈ ಬಾರಿಯಾದರೂ ತಮ್ಮನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳು, ಮಂತ್ರಿಗಳು ಸ್ಪಂದಿಸುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದಾರೆ.
ಎನ್ಆರೈ ಅಪೀಲ್ ಡೆ ಅಭಿಯಾನದಲ್ಲಿ ಪಾಲ್ಗೊಳ್ಳುವುದು ವಿಶ್ವದಾದ್ಯಂತ ಪಸರಿಸಿರುವ ಪ್ರತಿಯೊಂದು ಅನಿವಾಸಿ ಕನ್ನಡಪರ ಸಂಘಟನೆಗಳು ಕರ್ತವ್ಯ, ನಿಮ್ಮ ನಿಮ್ಮ ದೇಶದಲ್ಲಿರುವ ಅನಿವಾಸಿ ಕನ್ನಡಿಗರ ಬೇಡಿಕೆಗಳನ್ನು ಜನವರಿ 2ರ ಅಭಿಯಾನದ ಮೂಲಕ ಒಕ್ಕೊರಲಿನಿಂದ ಸರ್ಕಾರದ ಮುಂದಿಟ್ಟು ಸ್ಪಂದಿಸುವರೆಗೂ ಒತ್ತಾಯಿಸೋಣ ಎಂದು ಕನ್ನಡ ಸಂಘ ಬಹರೈನ್ ಅಧ್ಯಕ್ಷ ಪ್ರದೀಪ್ ಶೆಟ್ಟಿ ಹೇಳಿದ್ದಾರೆ.
ಮುಖ್ಯಮಂತ್ರಿ ಬೊಮ್ಮಾಯಿ ನೇತೃತ್ವದ ಕರ್ನಾಟಕ ಸರ್ಕಾರ ಅನಿವಾಸಿ ಕನ್ನಡಿಗರ ಅಳಲನ್ನು ಕಡೆಗಾಣಿಸಲಾರರು ಎಂಬ ಭರವಸೆ ಇದೆ. ಸತತವಾಗಿ ಆನಿವಾಸಿಗಳನ್ನು ಮೂಲೆಗುಂಪಾಗಿಸುವ ಕಾರ್ಯ ನಿಲ್ಲಬೇಕು. ಅನಿವಾಸಿ ಕನ್ನಡಿಗರ ಒಗ್ಗಟ್ಟಿನ ಅಭಿಯಾನ 'ಎನ್ಆರೈ ಅಪೀಲ್ ಡೇ' ಯಶಸ್ವಿಯಾಗಲಿ, ಎಲ್ಲಾ ಬೇಡಿಕೆ ತ್ವರಿತವಾಗಿ ಈಡೇರಲಿ ಎಂಬುದಾಗಿ ಹಾರೈಸುತ್ತೇನೆ ಎಂದು ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ, ಯುಎಇ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಹೇಳಿದ್ದಾರೆ.
ಅಂತರಾಷ್ಟ್ರೀಯ ಕನ್ನಡಿಗಾಸ್ ಫೆಡರೇಷನ್ ಸಂಚಾಲಕ ಹಿದಾಯತ್ ಅಡ್ಡೂರ್, ಕನ್ನಡ ಸಂಘ ಇಟಲಿಯ ಅಧ್ಯಕ್ಷ ಹೇಮೇಗೌಡ ಮಧು, ಕತಾರ್ ತುಳು ಕೂಟದ ಮಾಜಿ ಅಧ್ಯಕ್ಷ ರವಿ ಶೆಟ್ಟಿ, ಕನ್ನಡಿಗರು ದುಬೈ ಇದರ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ, ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷ ಎಂ. ಇ ಮೂಳೂರು, ಕನ್ನಡ ಮಿತ್ರರು ದುಬೈ ಇದರ ಅಧ್ಯಕ್ಷರು ಶಶಿಧರ ನಾಗರಾಜಪ್ಪ ಅವರು ಎನ್ಆರೈ ಅಪೀಲ್ ಡೇ' ಅಭಿಯಾನದ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ರಾಜ್ಯ ಸರ್ಕಾರದ, ಜನಪ್ರತಿನಿಧಿಗಳ ಗಮನ ಸೆಳೆಯಲಿದ್ದು, ನಾವೂ ಸಕ್ರಿಯವಾಗಿ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದೇವೆ ಎಂದು ಹೇಳಿದ್ದಾರೆ.