ಸುಡಾನ್ ಡಿ 29 (DaijiworldNews/MS): ದಕ್ಷಿಣ ಸುಡಾನ್ನಲ್ಲಿ ಭೀಕರ ಗಣಿ ದುರಂತ ಸಂಭವಿಸಿ ಕನಿಷ್ಠ 38 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಸುಡಾನ್ನ ಪಶ್ಚಿಮ ಕೊರ್ಡೋಫಾನ್ ರಾಜ್ಯದಲ್ಲಿ ಚಿನ್ನದ ಗಣಿ ಕುಸಿದು 38 ಮಂದಿ ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಸರ್ಕಾರಿ ಸ್ವಾಮ್ಯದ ಕಂಪನಿಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
"ಉಮ್ ಡ್ರೈಸಾಯಾ ಗಣಿ ಕುಸಿತದ ಪರಿಣಾಮವಾಗಿ ಸಾವನ್ನಪ್ಪಿದ 38 ಗಣಿ ಕಾರ್ಮಿಕರ ಸಾವಿಗೆ ಸೂಡಾನೀಸ್ ಮಿನರಲ್ ರಿಸೋರ್ಸಸ್ ಕಂಪನಿ ಲಿಮಿಟೆಡ್ನ ಜನರಲ್ ಮ್ಯಾನೇಜರ್ ಸಂತಾಪ ವ್ಯಕ್ತಪಡಿಸಿದ್ದಾರೆ"
ದುರಂತ ನಡೆದ ಚಿನ್ನದ ಗಣಿಯು ಪಶ್ಚಿಮ ಕೊರ್ಡೋಫಾನ್ ರಾಜ್ಯದ ಎಲ್ ನುಹುದ್ ಪಟ್ಟಣದ ಸಮೀಪದಲ್ಲಿದ್ದು, ಸುಡಾನ್ನ ರಾಜಧಾನಿ ಖಾರ್ಟೂಮ್ನ ಪಶ್ಚಿಮಕ್ಕೆ ಸುಮಾರು 500 ಕಿಮೀ ದೂರದಲ್ಲಿದೆ. ಈ ಪ್ರದೇಶವು ಗಣಿಗಾರಿಕೆಗೆ ಸೂಕ್ತವಲ್ಲ ಎಂದು ಕೊರ್ಡೋಫಾನ್ ರಾಜ್ಯ ಸರ್ಕಾರ ಮತ್ತು ರಾಜ್ಯದ ಭದ್ರತಾ ಸಮಿತಿಯು ನಿರ್ಧಾರಕ್ಕೆ ಬಂದಿದ್ದು, ಗಣಿಗಾರಿಕೆಯನ್ನು ಮುಚ್ಚಲು ನಿರ್ಧರಿಸಲಾಗಿತ್ತು. ಆದರೆ, ಈ ನಿರ್ಧಾರದ ಹೊರತಾಗಿಯೂ ಗಣಿಗಾರರು ಮತ್ತೆ ಗಣಿಗಾರಿಕೆಗೆ ಅಕ್ರಮವಾಗಿ ನುಸುಳಿ ಕೆಲಸ ಮಾಡುತ್ತಿದ್ದರು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ರೆಡ್ ಸೀ, ನಹ್ರ್ ಅಲ್-ನೀಲ್, ದಕ್ಷಿಣ ಕೊರ್ಡೋಫಾನ್, ಪಶ್ಚಿಮ ಕೊರ್ಡೋಫಾನ್ ಮತ್ತು ಉತ್ತರದ ರಾಜ್ಯಗಳು ಸೇರಿದಂತೆ ಸುಡಾನ್ನಾದ್ಯಂತ ಸಾಂಪ್ರದಾಯಿಕ ಗಣಿಗಾರಿಕೆ ಉದ್ಯಮದಲ್ಲಿ ಸುಮಾರು 20 ಲಕ್ಷ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಅಧಿಕೃತ ಅಂಕಿ ಅಂಶಗಳ ಪ್ರಕಾರ, ಸಾಂಪ್ರದಾಯಿಕ ಗಣಿಗಾರಿಕೆಯು ಸುಡಾನ್ನಲ್ಲಿನ ಒಟ್ಟು ಚಿನ್ನದ ಉತ್ಪಾದನೆಯಲ್ಲಿ ಸುಮಾರು ಶೇಕಡ 75ರಷ್ಟು ಕೊಡುಗೆ ನೀಡುತ್ತದೆ, ಇದು ವರ್ಷಕ್ಕೆ 93 ಟನ್ಗಳನ್ನು ಮೀರುತ್ತದೆ.