ಜಿನಿವಾ, ಡಿ.30 (DaijiworldNews/PY): "ಒಮಿಕ್ರಾನ್ ಹಾಗೂ ಡೆಲ್ಟಾ ರೂಪಾಂತರ ತಳಿ ಜೊತೆಯಾಗಿ ಕೊರೊನಾ ಪ್ರಕರಣಗಳ ಸುನಾಮಿ ಉಂಟು ಮಾಡಬಹುದು. ಇದರಿಂದ ರಾಷ್ಟ್ರಗಳ ಆರೋಗ್ಯ ವ್ಯವಸ್ಥೆಯ ಮೇಲೆ ಒತ್ತಡ ಹೆಚ್ಚುವಂತಾಗುತ್ತದೆ" ಎಂದು ಡಬ್ಲ್ಯುಹೆಚ್ಒ ಎಚ್ಚರಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಬ್ಲ್ಯುಹೆಚ್ಒ ಮುಖ್ಯಸ್ಥ ಟೆಡ್ರೋಸ್ ಅಡಾನೊಮ್ ಗೆಬ್ರೆಯೆಸಸ್, "ಡೆಲ್ಟಾದಂತೆಯೇ ಒಮಿಕ್ರಾನ್ ಹೆಚ್ಚಾಗಿ ಹರಡುತ್ತದೆ. ಇದು ಪ್ರಕರಣಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ. ಡೆಲ್ಟಾ ತಳಿಯಷ್ಟೇ ಅವಧಿಗೆ ಒಮಿಕ್ರಾನ್ ಸಹ ವ್ಯಾಪಿಸಿದ್ದಲ್ಲಿ ಪ್ರಕರಣಗಳ ಸುನಾಮಿಯೇ ಉಂಟಾಗಲಿದೆ. ಇದರಿಂದ ಆರೋಗ್ಯ ವ್ಯವಸ್ಥೆಯೇ ಕುಸಿಯಬಹುದು. ಅಲ್ಲದೇ, ಮತ್ತೆ ಜೀವಗಳು ಹಾಗೂ ಜೀವನ ನಿರ್ವಹಣೆಯ ಮೇಲೆ ಪರಿಣಾಮ ಬೀರಬಹುದು" ಎಂದು ಹೇಳಿದ್ದಾರೆ.
"ಕೊರೊನಾ ದೃಢಪಟ್ಟವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಬೇಕಾದ ಅನಿವಾರ್ಯತೆಯೊಂದಿಗೆ ಆರೋಗ್ಯ ಕಾರ್ಯಕರ್ತರು ಕೂಡಾ ಕಾಯಿಲೆಗೆ ಒಳಗಾಗುವ ಸಾಧ್ಯತೆ ಇರುತ್ತದೆ" ಎಂದಿದ್ದಾರೆ.
"ಒಮಿಕ್ರಾನ್ ಹೆಚ್ಚು ಅಪಾಯಕಾರಿಯೂ ಆಗಬಹುದು. ಆ ಬಗ್ಗೆಯೂ ಸಹ ನಾವು ಎಚ್ಚರವಹಿಸುವುದು ಮುಖ್ಯ" ಎಂದು ಹೇಳಿದ್ದಾರೆ.
"ಒಮಿಕ್ರಾನ್ ಕಡಿಮೆ ದಿನಗಳವರೆಗೆ ಉಳಿಯುತ್ತದೆ. ಹೆಚ್ಚು ವೇಗವಾಗಿಯೂ ಹರಡುತ್ತದೆ. ಆರೋಗ್ಯದ ಮೇಲೆ ಕಡಿಮೆ ಪರಿಣಾಮ ಬೀರುತ್ತದೆ ಎಂದಾದರೂ ಯುವ ಜನರಲ್ಲಿ ಈ ತಳಿಯ ಸೋಂಕು ಹೆಚ್ಚು ಕಾಣಿಸಿಕೊಳ್ಳುತ್ತಿದೆ" ಎಂದು ಡಬ್ಲ್ಯುಹೆಚ್ಒ ಆರೋಗ್ಯ ತುರ್ತು ಕಾರ್ಯಕ್ರಮಗಳ ಕಾರ್ಯನಿರ್ವಾಹಕ ನಿರ್ದೇಶಕ ಮೈಕ್ ರಯಾನ್ ತಿಳಿಸಿದ್ದಾರೆ.
"ಈಗ ಎರಡೂ ರೂಪಾಂತರ ತಳಿಗಳು ಸಾಂಕ್ರಾಮಿಕವಾಗುವುದನ್ನು ನಿಯಂತ್ರಿಸುವುದು ಮುಖ್ಯವಾಗಿದೆ" ಎಂದಿದ್ದಾರೆ.