ಕ್ವೆಟ್ಟಾ, ಡಿ.31 (DaijiworldNews/PY): ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ ಕ್ವೆಟ್ಟಾ ನಗರದ ಕೇಂದ್ರ ಭಾಗದಲ್ಲಿ ಡಿ.30ರ ಗುರುವಾರ ನಡೆದ ಬಾಂಬ್ ಸ್ಪೋಟದಲ್ಲಿ ಕನಿಷ್ಠ 4 ಮಂದಿ ಮೃತಪಟ್ಟಿದ್ದು, 15 ಮಂದಿ ಗಾಯಗೊಂಡಿದ್ದಾರೆ.
"ಜಿನ್ನಾ ರಸ್ತೆಯ ವಿಜ್ಞಾನ ಕಾಲೇನ ಸಮೀಪ ನಿಲ್ಲಿಸಿದ್ದ ಕಾರಿನ ಪಕ್ಕದಲ್ಲಿ ಬಾಂಬ್ ಅಡಗಿಸಿಟ್ಟಿದ್ದರು" ಎಂದು ಅಧಿಕಾರಿಗಳು ಹೇಳಿದ್ದಾರೆ.
ಸ್ಪೋಟಕ್ಕೆ ಬಳಸಲಾದ ಬಾಂಬ್ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
"ಘಟನಾ ಸ್ಥಳದಿಂದ ಮೃತದೇಹಗಳು ಹಾಗೂ ಗಾಯಾಳುಗಳನ್ನು ಕ್ವೆಟ್ಟಾದ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಸ್ಪೋಟದ ಬಳಿಕ ಹತ್ತಿರದ ಕಟ್ಟಡಗಳ ಗಾಜುಗಳು ಒಡೆದುಹೋಗಿವೆ ಹಾಗೂ ಗಾಯಗೊಂಡವರಲ್ಲಿ ಹೆಚ್ಚಿನ ಮಂದಿ ಗಾಜಿನ ಚೂರುಗಳಿಂದಾದ ಗಾಯಗಳಿಂದ ಬಳಲುತ್ತಿದ್ದರು" ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.