ಇಸ್ಲಾಮಾಬಾದ್, ಜ 03 (DaijiworldNews/PY): ಪಾಕ್ ಪ್ರಧಾನಮಂತ್ರಿ ಇಮ್ರಾನ್ ಖಾನ್ ಮಾಜಿ ಪತ್ನಿ ರೇಹಮ್ ಖಾನ್ ಪ್ರಯಾಣಿಸುತ್ತಿದ್ದ ವಾಹನದ ಮೇಲೆ ಗುಂಡಿನ ದಾಳಿ ನಡೆದಿದೆ.
ಈ ಕುರಿತು ಟ್ವೀಟ್ ಮಾಡಿರುವ ರೇಹಮ್, "ನನ್ನ ಸಂಬಂಧಿಯೋರ್ವರ ವಿವಾಹ ಸಮಾರಂಭದಿಂದ ಭಾನುವಾರ ರಾತ್ರಿ ನಾನು ವಾಪಾಸ್ಸಾಗುತ್ತಿದೆ. ಆ ವೇಳೆ ಮೋಟರ್ ಸೈಕಲ್ನಲ್ಲಿ ಬಂದ ಇಬ್ಬರು ಅಪರಿಚಿತರು ಗುಂಡಿನ ದಾಳಿ ನಡೆಸಿದ್ದಾರೆ. ಕಾರಿನಲ್ಲಿ ನನ್ನ ವೈಯುಕ್ತಿಕ ಕಾರ್ಯದರ್ಶಿ ಹಾಗೂ ಚಾಲಕ ಇದ್ದು, ಯಾವುದೇ ಅಪಾಯವಾಗಿಲ್ಲ. ಇಮ್ರಾನ್ ಖಾನ್ ಆಡಳಿತದ ಹೊಸ ಪಾಕಿಸ್ತಾನ ಈಗ ಕೊಲೆಗಡುಕರ, ದುರಾಸೆಬುರುಕರ ರಾಜ್ಯವಾಗಿದೆ" ಎಂದು ವಾಗ್ದಾಳಿ ನಡೆಸಿದ್ದಾರೆ.
"ಗುಂಡಿನ ದಾಳಿ ತನ್ನನ್ನು ಆಂತಕಕ್ಕೊಳಪಡಿಸಿದೆ. ನಾನು ಭಯದಿಂದ ವಾಹನವನ್ನು ಹಿಂದಕ್ಕೆ ತಿರುಗಿಸಬೇಕಾಯಿತು. ಅದೃಷ್ಟವಶಾತ್ ತನ್ನ ಸಿಬ್ಬಂದಿಗೆ ಯಾವುದೇ ಗಾಯಗಳಾಗಿಲ್ಲ" ಎಂದಿದ್ದಾರೆ.
"ಈ ಘಟನೆಯಿಂದ ನನಗೆ ಕೋಪ ಬಂದಿದೆ. ಹಾಗೂ ಜನಸಾಮಾನ್ಯರ ಬಗ್ಗೆ ಆತಂಕವಾಗುತ್ತಿದೆ. ಇದೊಂದು ಹೇಡಿತನದ ಕೃತ್ಯವಾಗಿದೆ" ಎಂದು ಮಾಜಿ ಪತಿ ವಿರುದ್ದ ಕಿಡಿಕಾರಿದ್ದಾರೆ.