ಕಬೂಲ್ , ಡಿ 08 (DaijiworldNews/MS): "ತಮ್ಮ ರಾಜಕೀಯ ಸಮಸ್ಯೆಯನ್ನೂ ಮೀರಿ , ಅಫ್ಗಾನಿಸ್ತಾನದಲ್ಲಿ ಎದುರಾಗಿರುವ ಮಾನವೀಯ ಬಿಕ್ಕಟ್ಟಿನ ಪರಿಹಾರಕ್ಕೆ ವಿಶ್ವದ ರಾಷ್ಟ್ರಗಳು ಸಹಾಯ ಹಸ್ತ ಚಾಚಬೇಕು" ಎಂದು ತಾಲಿಬಾನ್ ನಾಯಕರು ಮನವಿ ಮಾಡಿದ್ದಾರೆ.
ತಾಲಿಬಾನ್ ನಾಯಕ ಉಪ ಪ್ರಧಾನ ಮಂತ್ರಿ ಮುಲ್ಲಾ ಅಬ್ದುಲ್ ಘನಿ ಬರಾದಾರ್ ಮನವಿಯ ವಿಡಿಯೊವನ್ನು ಸರ್ಕಾರಿ ಸ್ವಾಮ್ಯದ ಮಾಧ್ಯಮ ಸಂಸ್ಥೆ 'ಆರ್ಟಿಎ' ಪ್ರಸಾರ ಮಾಡಿದೆ.
ಅಫ್ಗಾನಿಸ್ತಾನದ ಪ್ರಸ್ತುತ ಪರಿಸ್ಥಿತಿಯು ಗಂಭೀರವಾಗಿದೆ. ಕಳೆದ 20 ವರ್ಷಗಳ ಆಡಳಿತವೂ ದೇಶದಲ್ಲಿ ನಾಗರಿಕರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಲು ವಿಫಲವಾಗಿದ್ದು ಯಾವುದೇ ಮೂಲಸೌಕರ್ಯ ಸೃಷ್ಟಿ ಮಾಡಿಲ್ಲ. ದೇಶದ ನಾಗರಿಕರಿಗೆ ಹಣ, ವಸತಿ ಮತ್ತು ಆಹಾರದ ತೀವ್ರ ಅಗತ್ಯವಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ, ಅಫ್ಗನ್ನರಿಗೆ ವಿಶ್ವ ರಾಷ್ಟ್ರಗಳಿಂದ ಮಾನವೀಯ ಸಹಾಯದ ತುರ್ತು ಎದುರಾಗಿದೆ ಎಂದು ಮುಲ್ಲಾ ಬರಾದರ್ ಮನವಿ ಮಾಡಿಕೊಂಡಿದ್ದಾರೆ.
ಅದರೂ, ತುರ್ತು ಪರಿಸ್ಥಿತಿ ಎದುರಾದರೂ ತಾಲಿಬಾನ್ ಸರ್ಕಾರ ಸಂಪೂರ್ಣ ಸನ್ನದ್ಧವಾಗಿದೆ. ನಾಗರಿಕರಿಗೆ ಸಹಾಯ ಮಾಡಲು ಸಚಿವಾಲಯಗಳು ಮತ್ತು ಸರ್ಕಾರಿ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ ಎಂದು ಮುಲ್ಲಾ ಬರದಾರ್ ಹೇಳಿಕೊಂಡಿದ್ದಾರೆ.
ಅಫ್ಗಾನಿಸ್ತಾನದಲ್ಲಿ ಪ್ರಜಾಸತ್ತಾತ್ಮಕ ಸರ್ಕಾರವನ್ನು ಉರುಳಿಸಿ ಆಕ್ರಮಣಕಾರಿಯಾಗಿ ತಾಲಿಬಾನ್ ನಾಯಕರು ಆಡಳಿತದ ಚುಕ್ಕಾಣಿ ಹಿಡಿದಿದ್ದರು.
ಅಫ್ಘಾನಿಸ್ತಾನದಲ್ಲಿ ನೈಸರ್ಗಿಕ ವಿಕೋಪ ಉಂಟಾಗಿದ್ದು, ವಿಪರೀತ ಹಿಮ ಮತ್ತು ಮಳೆ ಎಡೆಬಿಡದೆ ಸುರಿಯುತ್ತಿದ್ದು, ದೇಶದ ಪ್ರಮುಖ ರಸ್ತೆಗಳು ಬಂದ್ ಆಗಿವೆ. ಜನ ಜೀವನ ಅಸ್ತವ್ಯಸ್ತಗೊಂಡಿದೆ. ಆಡಳಿತ ಹಾಗೂ ನೈಸರ್ಗಿಕ ವಿಕೋಪ ಆಫ್ಘಾನಿಘರನ್ನು ಸಂಕಷ್ಟಕ್ಕೆ ನೂಕಿದೆ.