ಇಸ್ಲಾಮಾಬಾದ್, ಜ 12 (DaijiworldNews/AN): ಪಾಕಿಸ್ತಾನದ ಆರ್ಥಿಕ ಸ್ಥಿತಿ ಹಲವು ದೇಶಗಳಿಗೆ ಹೋಲಿಕೆ ಮಾಡಿದರೆ ವಿಶೇಷವಾಗಿ ಭಾರತ ದೇಶಕ್ಕಿಂತ ಉತ್ತಮವಾಗಿದೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದರು.
ಇಸ್ಲಾಮಾಬಾದ್ನಲ್ಲಿ ಮಂಗಳವಾರ ನಡೆದ ಇಂಟರ್ನ್ಯಾಶನಲ್ ಚೇಂಬರ್ಸ್ ಶೃಂಗಸಭೆ 2022 ರ ಉದ್ಘಾಟನಾ ಅಧಿವೇಶನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ”ವಿಶ್ವದ ಹಲವು ದೇಶಗಳಿಗೆ ಹೋಲಿಸಿದರೆ ಜನ ಜೀವನ ನಡೆಸಲು ಪಾಕಿಸ್ತಾನ ಇನ್ನೂ ಅಗ್ಗದ ದೇಶಗಳಲ್ಲಿ ಒಂದಾಗಿದೆ. ಆದರೆ ಇತರ ಕೆಲವು ದೇಶದವರು ನಮ್ಮನ್ನು ವಿರೋಧಿಸಿ ಅಸಮರ್ಥರು ಎಂದು ಅಂದುಕೊಂಡಿದ್ದಾರೆ. ಆದರೆ ನಮ್ಮ ಸರ್ಕಾರವು ದೇಶವನ್ನು ಎಲ್ಲಾ ಬಿಕ್ಕಟ್ಟುಗಳಿಂದ ರಕ್ಷಣೆ ಮಾಡಿದೆ” ಎಂದು ಹೇಳಿದರು.
”ಇತರ ದೇಶಗಳಿಗಿಂತ ಪಾಕಿಸ್ತಾನದಲ್ಲಿ ತೈಲಗಳು ಕಡಿಮೆ ಬೆಲೆಗಳಿಗೆ ದೊರಕುತ್ತಿದ್ದು, ಇಂಟರ್ನ್ಯಾಷನಲ್ ಮಾನಿಟರಿ ಫಂಡ್ ಕೋರಿದ ಅವಶ್ಯಕತೆಗಳ ಭಾಗವಾಗಿ ಸಂಸತ್ತಿನಲ್ಲಿ ಹಣಕಾಸು ಮಸೂದೆಯನ್ನು ಮಂಡಿಸಿದ ಸಮಯದಲ್ಲಿ ಸರ್ಕಾರವು ಅನುಮೋದನೆ ನೀಡಿದರೆ, ಪಾಕಿಸ್ತಾನಕ್ಕೆ 1 ಶತಕೋಟಿ ಮೊತ್ತದ ಸಹಾಯ ದೊರಕಲಿದೆ” ಎಂದು ತಿಳಿದು ಬಂದಿದೆ.
ಈ ಮಸೂದೆಯ ಬಗ್ಗೆ ಮಂಗಳವಾರ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಚರ್ಚಿಸಲಾಗಿದ್ದು, ಈ ಸಂದರ್ಭದಲ್ಲಿ ಪಾಕಿಸ್ತಾನ್ ಮುಸ್ಲಿಂ ಲೀಗ್ ನಾಯಕ ಮತ್ತು ನ್ಯಾಷನಲ್ ಅಸೆಂಬ್ಲಿಯ ವಿರೋಧ ಪಕ್ಷದ ನಾಯಕ ಶಹಬಾಜ್ ಷರೀಫ್ ಅವರು ಸರ್ಕಾರವು ಪಾಕಿಸ್ತಾನವನ್ನು ಕೇವಲ 1 ಬಿಲಿಯನ್ ಯುಎಸ್ಡಿಗಾಗಿ ಇರಿಸುತ್ತಿದೆ ಎಂದು ಆರೋಪಿಸಿದರು.