ಲಂಡನ್ , ಜ 15 (DaijiworldNews/MS): ಇನ್ಪೋಸಿಸ್ ಸಂಸ್ಥಾಪಕ ಡಾ. ಎನ್.ಆರ್ ನಾರಾಯಣ ಮೂರ್ತಿ ಅವರ ಅಳಿಯ, ಬ್ರಿಟನ್ ನ ವಿತ್ತ ಸಚಿವ ರಿಷಿ ಸುನಕ್ ಆ ದೇಶದ ಪ್ರಧಾನ ಮಂತ್ರಿಯಾಗಲಿದ್ದಾರೆಯೇ? ಹೀಗೊಂದು ಸುದ್ದಿ ಬ್ರಿಟನ್ ನಲ್ಲಿ ಹರಿದಾಡುತ್ತಿವೆ.
ಹಾಲಿ ಪ್ರಧಾನಿ ಬೋರಿಸ್ ಜಾನ್ಸನ್ ಲಾಕ್ ಡೌನ್ ಜಾರಿಯಲ್ಲಿದ್ದಾಗ 2020 ಮೇ ನಲ್ಲಿ ಅವರ ಅಧಿಕೃತ ನಿವಾಸದಲ್ಲಿ ಮದ್ಯದ ಪಾರ್ಟಿ ಮಾಡಿದ ಆರೋಪಕ್ಕೆ ಸಂಬಂಧಿಸಿ ಆಡಳಿತ ರೂಢ ಕನ್ಸರ್ವೆಟಿವ್ ಪಕ್ಷದಿಂದ ಹಾಗೂ ವಿಪಕ್ಷದಿಂದ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.
ಇದಲ್ಲದೆ ಬ್ರಿಟನ್ ಪ್ರಿನ್ಸ್ ಫಿಲಿಪ್ ಅಂತ್ಯಕ್ರಿಯೆ ನಡೆದ ಕಳೆದ ವರ್ಷ ಏಪ್ರಿಲ್ 17 ರ ಮುನ್ನಾ ದಿನ ಡೌನಿಂಗ್ ಸ್ಟ್ರೀಟ್ ನಲ್ಲಿ 30 ಮಂದಿ ಡ್ರಗ್ಸ್ ಹಾಗೂ ಮದ್ಯದ ಪಾರ್ಟಿ ನಡೆಸಿದ್ದರು ಎಂಬ ಆರೋಪ ಬಂದಿದೆ. ಫಿಲಿಪ್ ಅವರ ಪಾರ್ಥಿವ ಶರೀರ ಇನ್ನೂ ಇರುವಾಗಲೇ ಮೋಜಿನ ಪಾರ್ಟಿ ನಡೆಸಿರುವ ಬಗ್ಗೆ ತೀವ್ರ ಆಕ್ಷೇಪಣೆಗಳು ವ್ಯಕ್ತವಾಗಿವೆ.
ಬೋರಿಸ್ ಬ್ರಿಟಿಷ್ ಸಂಸತ್ತಿನಲ್ಲಿ ಕ್ಷಮೆಯಾಚಿಸಿದ ನಂತರವೂ ಹುದ್ದೆಯಿಂದ ಕೆಳಗಿಳಿಯಬೇಕು ಎಂಬ ಬೇಡಿಕೆಗಳು ಕೇಳಿಬರುತ್ತಿದೆ . ಬೋರಿಸ್ ಜಾನ್ಸನ್ ರಾಜೀನಾಮೆ ನೀಡುವ ಪರಿಸ್ಥಿತಿ ಬಂದರೆ ಅವರ ಸ್ಥಾನಕ್ಕೆ ಭಾರತೀಯ ಮೂಲದ ರಿಷಿ ಪ್ರಧಾನಿಯಾಗುವ ಸಾಧ್ಯತೆಯನ್ನು ತಳ್ಳಿ ಹಾಕಲು ಸಾಧ್ಯವಿಲ್ಲ ಎಂದು ಬ್ರಿಟಿಷ್ ಮಾಧ್ಯಮ ವರದಿ ಮಾಡಿದೆ.
ಬೋರಿಸ್ ಹೌಸ್ ಆಫ್ ಕಾಮನ್ಸ್ ನಲ್ಲಿ ಕ್ಷಮೆಯಾಚಿಸುವ ಸಮಯದಲ್ಲಿ ರಿಷಿ ಹೌಸ್ ನಲ್ಲಿ ಇಲ್ಲದಿರುವುದು ಈ ಪ್ರಚಾರಕ್ಕೆ ಮತ್ತಷ್ಟು ಇಂಬು ನೀಡುತ್ತದೆ. ಅದರೆ ಈ ಬಗ್ಗೆ ಟ್ವೀಟ್ ಮಾಡಿರುವ ರಿಷಿ, ತಮ್ಮ ಇಲಾಖೆಗೆ ಸಂಬಂಧಿಸಿದ ಕೆಲಸದಲ್ಲಿ ನಿರತರಾಗಿರುವ ಕಾರಣ ಹೌಸ್ ಗೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.
ಬ್ರಿಟನ್ ನಲ್ಲಿ ಹುಟ್ಟಿ ಬೆಳೆದ ರಿಷಿ, ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಅವರ ಪುತ್ರಿ ಅಕ್ಷತ ಅವರನ್ನು ವಿವಾಹವಾಗಿದ್ದಾರೆ. ಅವರಿಗೆ ಕೃಷ್ಣ ಮತ್ತು ಅನುಷ್ಕಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.