ವಾಷಿಂಗ್ಟನ್, ಜ 20 (DaijiworldNews/MS): ಅಮೆರಿಕ ಅಧ್ಯಕ್ಷರಾಗಿ ಜೊ ಬೈಡನ್ ಅಧಿಕಾರ ವಹಿಸಿಕೊಂಡು ಜ. 20 ಕ್ಕೆ ಒಂದು ವರ್ಷ ತುಂಬಿದೆ. ಅಧಿಕಾರದ ಮೊದಲ ವರ್ಷವನ್ನು ಸ್ಮರಿಸುತ್ತಾ, 2024ನೇ ಅಧ್ಯಕ್ಷೀಯ ಚುನಾವಣೆಗೆ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ತಮ್ಮ ಉತ್ತರಾಧಿಕಾರಿ ಎಂದು ಜೊ ಬೈಡನ್ ಹೇಳಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ, ಕಮಲಾ ಹ್ಯಾರಿಸ್ ಅವರ ಕೆಲಸದ ಮೇಲೆ ನಿಮಗೆ ನಂಬಿಕೆ, ವಿಶ್ವಾಸ-ತೃಪ್ತಿಯಿದೆಯೇ, ಅವರು ಮುಂಬರುವ ಚುನಾವಣೆಯಲ್ಲಿ ತಮ್ಮ ಉತ್ತರಾಧಿಕಾರಿಯಾಗುತ್ತಾರೆಯೇ ಎಂದು ಸುದ್ದಿಗಾರರು ಪ್ರಶ್ನಿಸಿದ್ದರು. ಇದಕ್ಕೆ ತಕ್ಷಣ ಉತ್ತರಿಸಿದ ಜೊ ಬೈಡನ್, " ಖಂಡಿತವಾಗಿಯೂ ಅವರೇ ಉತ್ತರಾಧಿಕಾರಿ. ಉಪಾಧ್ಯಕ್ಷೆಯಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ" ಎಂದಿದ್ದಾರೆ.
ಅಮೆರಿಕದ ಇತಿಹಾಸದಲ್ಲಿ ಕಮಲಾ ಹ್ಯಾರಿಸ್ ಅವರು ಉಪಾಧ್ಯಕ್ಷೆಯಾದ ಮೊದಲ ಕಪ್ಪು ಮಹಿಳೆಯಾಗಿದ್ದು ಮೊದಲ ಭಾರತೀಯ ಮೂಲದ ಅಮೆರಿಕ ಮಹಿಳೆ ಎಂಬ ಹೆಗ್ಗಳಿಕೆ ಕೂಡ ಇದೆ.
ಹ್ಯಾರಿಸ್ ಓಕ್ಲ್ಯಾಂಡ್ನಲ್ಲಿ ಜನಿಸಿದರು ಮತ್ತು ಕ್ಯಾಲಿಫೋರ್ನಿಯಾದ ಬರ್ಕ್ಲಿಯಲ್ಲಿ ಬೆಳೆದರು. ಅವರ ತಾಯಿ ಭಾರತ ಮೂಲದವರು ಮತ್ತು ತಂದೆ ಜಮೈಕಾದವರು.