ಬ್ರುಸೆಲ್ಸ್ ಜ 22 (DaijiworldNews/KP): ವಿಶ್ವಾದ್ಯಂತ ಒಬ್ಬಂಟಿಯಾಗಿ ವಿಮಾನ ಹಾರಾಟ ಮಾಡಿ ದಾಖಲೆ ಬರೆದ ಮೊದಲ ಯುವತಿ ಎಂಬ ಹೆಗ್ಗಳಿಕೆಗೆ ಬ್ರಿಟಿಷ್-ಬೆಲ್ಜಿಯಂ ಮೂಲದ 19 ವರ್ಷದ ಝಾರಾ ರುದರ್ಫೋರ್ಡ್ ಪಾತ್ರರಾಗಿದ್ದಾಳೆ.
ಮೈಕ್ರೋಲೈಟ್ ವಿಮಾನದಲ್ಲಿ ಏಕಾಂಗಿಯಾಗಿ ಬರೊಬ್ಬರಿ 51 ಸಾವಿರ ಕಿ.ಮೀ.ವರೆಗೆ ಹಾರಾಟ ನಡೆಸಿ ತನ್ನ 18ನೇ ವರ್ಷದಲ್ಲಿ ದಾಖಲೆ ಬರೆದಿರುವ ಯುವತಿಯ ಸಾಧನೆ ಮೆಚ್ಚಲೇಬೇಕು. 2021ರ ಆಗಸ್ಟ್ 18 ರಂದು ಪ್ರಯಾಣ ಆರಂಭಿಸಿದ್ದ ಇವರು ಜನವರಿ 20ರಂದು ಕೋರ್ಟಿಜ್ಕ್-ವೆವೆಲ್ಗೆಮ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾಳೆ.
ಇದಕ್ಕೂ ಮೊದಲು 2017ರಲ್ಲಿ ಅಫ್ಘಾನ್ ಮೂಲದ ಅಮೆರಿಕ ಪ್ರಜೆ ಶಾಸ್ತಾ ವೈಸ್ ತಮ್ಮ 30ನೇ ವಯಸ್ಸಿನಲ್ಲಿ ಪ್ರಪಂಚದಾದ್ಯಂತ ಏಕಾಂಗಿಯಾಗಿ ವಿಮಾನ ಹಾರಾಟ ನಡೆಸಿದ್ದರು. ಆದರೆ ಝಾರಾ ಪ್ರಪಂಚದಾದ್ಯಂತ 5 ಖಂಡಗಳನ್ನು ಒಂಟಿಯಾಗಿ ಸುತ್ತಿದ ಅತ್ಯಂತ ಕಿರಿಯ ಪೈಲೆಟ್ ಎಂಬ ಕೀರ್ತಿ ಪಡೆದಿದ್ದಾರೆ.
2018ರಲ್ಲಿ ಅಮೆರಿಕ ಮೂಲದ ಮೇಸನ್ ಆಂಡ್ಯ್ರೂಸ್ ರವರು ತಮ್ಮ 18 ವರ್ಷದಲ್ಲಿ ವಿಶ್ವಾದ್ಯಂತ ವಿಮಾನ ಹಾರಾಟ ಮಾಡಿದ ಅತ್ಯಂತ ಕಿರಿಯ ಪುರುಷ ಎಂಬ ದಾಖಲೆಯನ್ನು ಬರೆದಿದ್ದರು.