ಅತ್ಮೇಹ್ (ಸಿರಿಯಾ), ಫೆ 04(DaijiworldNews/KP): ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಮುಖ್ಯಸ್ಥ ಅಬು ಇಬ್ರಾಹಿಂ ಅಲ್-ಹಶಿಮ್ ಅಲ್-ಖುರೈಷಿಯನ್ನು ಅಮೇರಿಕಾದ ವಿಶೇಷ ಪಡೆಗಳು ಸಿರಿಯಾದಲ್ಲಿ ಹೊಡೆದುರುಳಿಸಿದೆ.
ವಾಯುವ್ಯ ಸಿರಿಯಾದಲ್ಲಿ ಮುಂಜಾನೆ ಭೀಕರ ದಾಳಿಯಲ್ಲಿ ಅಮೇರಿಕಾದ ವಿಶೇಷ ಕಮಾಂಡೋಗಳು ನಡೆಸಿದ ದಾಳಿಯಲ್ಲಿ ಇಸ್ಲಾಮಿಕ್ ಸ್ಟೇಟ್ ನಾಯಕ ಸಾವನ್ನಪ್ಪಿದ್ದಾನೆ ಎಂದು ಅಧ್ಯಕ್ಷ ಜೋ ಬೈಡೆನ್ ಗುರುವಾರ ತಿಳಿಸಿದ್ದಾರೆ. ದಾಳಿಯ ಸಮಯದಲ್ಲಿ ಸಾವನ್ನಪ್ಪಿದ ಕನಿಷ್ಠ 13 ಜನರಲ್ಲಿ ಮಹಿಳೆಯರು ಮತ್ತು ಮಕ್ಕಳು ಕೂಡ ಇದ್ದಾರೆ ಎಂದು ರಕ್ಷಣಾ ಕಾರ್ಯಕರ್ತರು ತಿಳಿಸಿದ್ದಾರೆ.
ಹೆಲಿಕಾಪ್ಟರ್ನಲ್ಲಿ ಆಗಮಿಸಿದ ಅಮೇರಿಕಾದ ವಿಶೇಷ ಪಡೆಗಳು ಇದ್ಲಿಬ್ ಪ್ರಾಂತ್ಯದ ಉಗ್ರರ ಅಡಗು ತಾಣಗಳ ಮೇಲೆ ಎರಡು ತಾಸು ಗುಂಡಿನ ಚಕಮಕಿ ನಡೆಸಿದ್ದು, ಅಷ್ಟರಲ್ಲಿ ಅಲ್ಖುರೈಷಿ ಕುಟುಂಬ ಸಹಿತ ತನ್ನನ್ನು ತಾನು ಬಾಂಬ್ ಸ್ಫೋಟಿಸಿಕೊಂಡು ಸಾವಿಗೀಡಾಗಿದ್ದಾನೆ ಎಂದು ಬೈಡೆನ್ ಸ್ಪಷ್ಟಪಡಿಸಿದ್ದಾರೆ.
ಇನ್ನು ಶ್ವೇತಭವನದ ರೂಸ್ವೆಲ್ಟ್ ರೂಮ್ನಲ್ಲಿ ಮಾತನಾಡಿದ ಬಿಡೆನ್ ಅವರು, ನಮ್ಮ ಸೈನಿಕರ ಶೌರ್ಯಕ್ಕೆ ಧನ್ಯವಾದಗಳು, ಭಯಾನಕ ಭಯೋತ್ಪಾದಕ ನಾಯಕ ಇನ್ನಿಲ್ಲ ಹಾಗೂ ಎಲ್ಲಾ ಅಮೇರಿಕಾ ಸೇನ ಪಡೆಗಳು ಕಾರ್ಯಾಚರಣೆಯಿಂದ ಸುರಕ್ಷಿತವಾಗಿ ಮರಳಿದ್ದಾರೆ ಎಂದು ಅವರು ಹೇಳಿದರು.
ಪೆಂಟಗನ್ನ ಮುಖ್ಯ ವಕ್ತಾರ ಜಾನ್ ಎಫ್. ಕಿರ್ಬಿ ಗುರುವಾರ ಮಧ್ಯಾಹ್ನ ಸುದ್ದಿಗೋಷ್ಠಿಯಲ್ಲಿ ದಾಳಿಗೆ ಸಂಬಂಧಿಸಿದ ಸಾವುನೋವುಗಳನ್ನು ಉದ್ದೇಶಿಸಿ ಮಾತನಾಡಿದರು . ಅಮಾಯಕರ ಸಾವಿಗೆ ಅಬ್ದುಲ್ಲಾ ಮತ್ತು ಅವನ ಲೆಫ್ಟಿನೆಂಟ್ಗಳೇ ಕಾರಣ ಎಂದು ಅವರು ಹೇಳಿದರು, ಆದರೆ ಅದೇ ಸಮಯದಲ್ಲಿ ಕಟ್ಟಡದಲ್ಲಿದ ಮಕ್ಕಳು ಸೇರಿದಂತೆ 10 ನಾಗರಿಕರನ್ನು ಯುಎಸ್ ಪಡೆಗಳು ಸ್ಥಳಾಂತರಿಸಿದ್ದಾರೆ ಎಂದು ಅವರು ಹೇಳಿದರು.