ಲಾಹೋರ್, ಫೆ 12 (DaijiworldNews/KP): ಪಾಕಿಸ್ತಾನದ ಆಡಳಿತಾರೂಢ ಪಾಕಿಸ್ತಾನ್-ತೆಹ್ರಿಕ್ -ಇ-ಇನ್ಸಾಫ್ ಪಕ್ಷ ಸಂಸದ ಡಾ.ಅಮೀರ್ ಲಿಯಾಖತ್ನೇ 18 ವರ್ಷದ ಯುವತಿಯನ್ನು ಮೂರನೇ ಮದುವೆಯಾಗಿ ಸುದ್ದಿಯಾಗಿದ್ದಾರೆ, ಪಾಕಿಸ್ತಾನದಲ್ಲಿ ಮೂರು ಮದುವೆಯಾಗಲು ಅನುಮತಿಯಿದ್ದರೂ ಇಬ್ಬರ ವಯಸ್ಸಿನ ಅಂತರದ ಬಗ್ಗೆ ಭಾರೀ ಚರ್ಚೆ ಶುರುವಾಗಿದೆ.
ಅಮೀರ್ ಲಿಯಾಖತ್ಗೆ ಇದು ಮೂರನೇ ಮದುವೆ. ಅವರ ಎರಡನೇ ಪತ್ನಿ ವಿಚ್ಛೇದನವನ್ನು ಘೋಷಿಸಿದ ದಿನವೇ ಮೂರನೇ ಮದುವೆ ನಡೆದಿದೆ.
ತಮ್ಮ ಮೂರನೇ ಮದುವೆಯ ಫೋಟೋವನ್ನು ಅಮೀರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು. ಅಮೀರ್ ತಮ್ಮ ಎರಡನೇ ಮದುವೆಯನ್ನು ಕೆಟ್ಟ ಸಮಯ ಎಂದು ಪರಿಗಣಿಸಿದ್ದಾರೆ. ಈ ಬಗ್ಗೆ ಬರೆದಿರುವ ಅಮೀರ್ ಕಳೆದ ರಾತ್ರಿ, 18 ವರ್ಷದ ಸೈಯದಾ ಡೇನಿಯಾ ಶಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದೇನೆ. ಅವರು ದಕ್ಷಿಣ ಪಂಜಾಬ್ನ ಲೋಧ್ರಾನ್ನ ಗೌರವಾನ್ವಿತ ನಜೀಬ್ ಉತ್ ತರೈನ್ "ಸಾದತ್" ಕುಟುಂಬಕ್ಕೆ ಸೇರಿದವರು. "ನಾನು ಈಗಷ್ಟೇ ಒಂದು ಭಯಾನಕ, ಕರಾಳ ದಿನಗಳಿಂದ ಆಚೆ ಬಂದಿದ್ದೇನೆ. ನನ್ನ ಜೀವನಕ್ಕೆ ಈಗ ದೊಡ್ಡ ತಿರುವು ಸಿಕ್ಕಿದೆ. ನಮ್ಮಿಬ್ಬರನ್ನು ನೀವೆಲ್ಲರೂ ಆಶೀರ್ವದಿಸಬೇಕು" ಎಂದು ಬರೆದುಕೊಂಡಿದ್ದಾರೆ.
ಅಮೀರ್ ಅವರು ಸಂಸದರ ಜೊತೆಗೆ ಪಾಕಿಸ್ತಾನದಲ್ಲಿ ಜನಪ್ರಿಯ ಟಿವಿ ನಿರೂಪಕರಾಗಿದ್ದಾರೆ. ಅವರ ಎರಡನೇ ಪತ್ನಿ ಸೈಯದ್ ಟುಬಾ ಓರ್ವ ಖ್ಯಾತ ನಟಿ. ಆದರೆ, ಜಗಳದಿಂದಾಗಿ ಇಬ್ಬರೂ ಒಂದೂವರೆ ವರ್ಷದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ವಿಚ್ಛೇದನದ ಬಗ್ಗೆ ಟುಬಾ ತಮ್ಮ ಇನ್ಸ್ಟಾಗ್ರಾಮ್ ಮೂಲಕ ಮಾಹಿತಿ ನೀಡಿದ್ದಾರೆ. ಅವರ ನಡುವಿನ ಸಮನ್ವಯದ ಎಲ್ಲಾ ಭರವಸೆ ಕಳೆದುಹೋಗಿದೆ ಎಂದು ಟುಬಾ ಒಪ್ಪಿಕೊಂಡಿದ್ದರು. ಆದ್ದರಿಂದ, ನ್ಯಾಯಾಲಯದಿಂದ, ಅವರು ಖುಲಾ ಅಂದರೆ ವಿಚ್ಛೇದನದ ಮಾರ್ಗವನ್ನು ಆರಿಸಿಕೊಂಡರು.
ಇನ್ನು ಮದುವೆ ಕುರಿತಂತೆ ಸಾಯೀದಾ ಶಾ ಕೂಡ ತನ್ನ ಸೋಶಿಯಲ್ ಮೀಡಿಯಾದಲ್ಲಿ ಬರೆದು ಕೊಂಡಿದ್ದಾರೆ. "ನಾನು ಬಾಲ್ಯದಲ್ಲೇ ಅಮೀರ್ ಅವರನ್ನು ನೋಡಿದ್ದೆ. ಟಿವಿಗಳಲ್ಲಿ ನೋಡುವಾಗ ಅವರ ಮೇಲೆ ಪ್ರೀತಿಯಾಗಿತ್ತು. ಈಗ ನನ್ನ ಚೈಲ್ಡ್ ಹುಡ್ ಹೀರೋ ನನಗೆ ಸಿಕ್ಕಿದ್ದಾರೆ" ಅಂತ ಪಾಕಿಸ್ತಾನದ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಅಮೀರ್ಗೆ ಸದ್ಯ 49 ವರ್ಷ ಹಾಗೂ ಸಾಯೀದಾ ಅವರಿಗೆ 18 ವರ್ಷ ಅವರಿಬ್ಬರ ನಡುವೆ ಸುಮಾರು 31 ವರ್ಷಗಳ ಅಂತರವಿದ್ದು, ಮದುವೆ ಘೋಷಣೆಯಾದಾಗಿನಿಂದಲೂ ಪಾಕಿಸ್ತಾನಿಯರು ಮೀಮ್ಗಳಲ್ಲಿ ಹಂಚಿಕೊಂಡು ನವದಂಪತಿಗಳ ನಡುವಿನ ವಯಸ್ಸಿನ ವ್ಯತ್ಯಾಸವನ್ನು ತಮಾಷೆ ಮಾಡುತ್ತಿದ್ದಾರೆ.