ಅಮೇರಿಕಾ, ಫೆ 14 (DaijiworldNews/KP): ಉಕ್ರೇನ್ ಮತ್ತು ರಷ್ಯಾ ನಡುವಿನ ಬಿಕ್ಕಟ್ಟು ಮತ್ತಷ್ಟು ಉಲ್ಬಣವಾಗಿದ್ದು, ಯಾವುದೇ ಸಮಯದಲ್ಲಿ ಬೇಕಾದರೂ ಯುದ್ಧ ಸಂಭವಿಸಬಹುದು ಎಂದು ಹೇಳಲಾಗುತ್ತಿದೆ.
ಸಾಂದರ್ಭಿಕ ಚಿತ್ರ
ಶನಿವಾರ ರಾತ್ರಿಯಷ್ಟೇ ಅಮೇರಿಕಾ ಅಧ್ಯಕ್ಷ ಜೋ ಬೈಡೆನ್ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನಡುವೆ ಒಂದು ಗಂಟೆ ದೂರವಾಣಿ ಸಂಭಾಷಣೆ ನಡೆದಿದ್ದು, ಈ ಸಂದರ್ಭದಲ್ಲಿ ಉಕ್ರೇನ್ ಮೇಲೆ ದಾಳಿ ನಡೆದರೆ ಸೂಕ್ತ ಕ್ರಮ ಎದುರಿಸಬೇಕಾಗುತ್ತದೆ ಎಂದು ಅಮೇರಿಕಾದ ಅಧ್ಯಕ್ಷ ಜೋ ಬೈಡೆನ್ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ಗೆ ಎಚ್ಚರಿಕೆ ನೀಡಿದ್ದಾರೆ.
ಇನ್ನು ಅಮೇರಿಕಾದ ಕೊಲೆರೊಡೋದಲ್ಲಿ ಪ್ರಧಾನ ಕಚೇರಿ ಹೊಂದಿರುವ ಮಾಕ್ಸರ್ ಟೆಕ್ನಾಲಜೀಸ್ ಬೆಲಾರೂಸ್ ವ್ಯಾಪ್ತಿಯ ಗಡಿ ಪ್ರದೇಶದಲ್ಲಿ ರಷ್ಯಾವು ಹೊಸತಾಗಿ ಶಸ್ತ್ರಾಸ್ತ್ರ ಸಹಿತ ಯೋಧರನ್ನು ಸೇರಿಸಿರುವ ಅಂಶವೂ ಉಪಗ್ರಹ ಚಿತ್ರಗಳಿಂದ ದೃಢಪಟ್ಟಿದೆ.
ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡುವ ಆತಂಕ ಹೆಚ್ಚಾಗುತ್ತಿದ್ದಂತೆಯೇ ಹಲವು ರಾಷ್ಟ್ರಗಳು ತಮ್ಮ ವಿಮಾನ ಸಂಚಾರ ರದ್ದುಗೊಳಿಸಿವೆ ಹಾಗೂ ಕೆಲವು ವಿಮಾನಗಳ ಮಾರ್ಗ ಬದಲಿಸಲು ಚಿಂತನೆ ನಡೆಸಿದೆ. ಅಲ್ಲದೆ 21 ರಾಷ್ಟ್ರಗಳ ಸರ್ಕಾರವು ಉಕ್ರೇನ್ನಲ್ಲಿರುವ ತಮ್ಮ ಪ್ರಜೆಗಳನ್ನು ಕರೆಯಿಸಿಕೊಳ್ಳುವ ಪ್ರಕ್ರಿಯೆ ನಡೆಸುತ್ತಿದ್ದಾರೆ.