ಮಾಸ್ಕೋ, ಫೆ 20 (DaijiworldNews/KP): ಉಕ್ರೇನ್ ಸೃಷ್ಟಿಯಾಗಿದ್ದು ಉದ್ವಿಗ್ನ ಸ್ಥಿತಿ ಎರಡು ದಿನಗಳ ಹಿಂದೆ ಶಾಂತಗೊಂಡಿತ್ತು, ಆದರೆ ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ರಷ್ಯಾ ಬೆಂಬಲಿತ ಪ್ರತ್ಯೇಕತವಾದಿಗಳು ರಷ್ಯಾ ಗಡಿಯಲ್ಲಿ ಉಕ್ರೇನ್ನ ಸೈನಿಕನೊಬ್ಬನನ್ನು ಹತ್ಯೆಗೈದಿದ್ದಾರೆ.
ಸಾಂದರ್ಭಿಕ ಚಿತ್ರ
ಸದ್ಯ ಉಕ್ರೇನ್ನಲ್ಲಿ ಯುದ್ಧದ ಕರಿಛಾಯೆ ಮೂಡತೊಡಗಿದ್ದು, ರಷ್ಯಾ ಮತ್ತು ಉಕ್ರೇನ್ ಪರಸ್ಪರ ಯುದ್ಧ ಸನ್ನದ್ಧವಾಗಿ ನಿಂತಿದೆ.
ಇನ್ನು ಕದನ ವಿರಾಮ ಒಪ್ಪಂದದ ವೇಳೆ ನಿರ್ಬಂಧಿಸಲಾಗಿದ್ದ 82 ಮತ್ತು 120 ಮಿ.ಮೀ. ಕ್ಯಾಲಿಬರ್ ಮೋರ್ಟಾರ್ ಶೆಲ್ಗಳನ್ನು ಬಳಸಿ ಬಂಡುಕೋರರು ತಮ್ಮ ಸೈನಿಕನನ್ನು ಕೊಂದಿದ್ದಾರೆ ಎಂದು ಉಕ್ರೇನ್ ಆರೋಪಿಸಿದೆ.
ಇದರ ಮಧ್ಯೆ ರಷ್ಯಾವು ಉಕ್ರೇನ್ ಗಡಿಭಾಗದಲ್ಲಿ ಮತ್ತಷ್ಟು ಜೆಟ್ಗಳನ್ನು ತಂದಿಳಿಸಿವೆ, ಅಲ್ಲದೆ ಅಧ್ಯಕ್ಷ ಪುಟಿನ್ ಸಮ್ಮುಖದಲ್ಲಿ ಶನಿವಾರ ಉಕ್ರೇನ್ ಗಡಿಯ ಸಮೀಪ ವ್ಯೂಹಾತ್ಮಕ ಅಣ್ವಸ್ತ್ರ ಕ್ಷಿಪಣಿಗಳ ಪರೀಕ್ಷೆ ನಡೆಸಿದೆ.
ಇನ್ನೊಂದೆಡೆ ಬಂಡುಕೋರರ ಹಿಡಿತದಲ್ಲಿರುವ ಪ್ರಾಂತ್ಯದ ಮೂಲಕ ಸಾಗಿರುವ ಅಂತಾರಾಷ್ಟ್ರೀಯ ತೈಲ ಪೈಪ್ಲೈನ್ ಶನಿವಾರ ಸ್ಫೋಟಗೊಂಡಿದೆ. ಈ ಎಲ್ಲ ಬೆಳವಣಿಗೆಗಳು ಯುದ್ಧ ಭೀತಿಯನ್ನು ಉಲ್ಬಣ ಗೊಳಿಸಿದ್ದು, ಯಾವುದೇ ಕ್ಷಣದಲ್ಲಿ ಸಮರ ಆರಂಭವಾಗುವ ಸುಳಿವನ್ನು ನೀಡಿವೆ.
ಇನ್ನು ಶಸ್ತ್ರಾಸ್ತ್ರಗಳನ್ನು ಬಳಸಲು ಬರುವ ಎಲ್ಲರೂ ತಮ್ಮ ತಮ್ಮ ಕುಟುಂಬಗಳು, ಪತ್ನಿ-ಮಕ್ಕಳನ್ನು ರಕ್ಷಿಸಲು ಸಜ್ಜಾಗಿ. ಒಗ್ಗಟ್ಟಾಗಿ ವಿಜಯ ಯಾತ್ರೆ ಮಾಡೋಣ ಎಂದು ಲುಹಾನ್ಸ್ಕ್ ಪ್ರದೇಶದ ಪ್ರತ್ಯೇಕತವಾದಿ ನಾಯಕ ಲಿಯೋನಿಡ್ ಪ್ಯಾಸೆನಿಕ್ ಕರೆ ನೀಡಿದ್ದಾರೆ.
ಈ ಪ್ರತ್ಯೇಕತವಾದಿಗಳು ಮತ್ತು ಉಕ್ರೇನ್ ಪಡೆಗಳ ನಡುವೆ 8 ವರ್ಷಗಳಿಂದ ಸಂಘರ್ಷ ನಡೆಯುತ್ತಲೇ ಇದೆ. ಆದರೆ ಇತ್ತೀಚೆಗೆ ಶೆಲ್ ದಾಳಿಗಳು, ಕಾರ್ ಬಾಂಬ್ ಸ್ಫೋಟ ಹೆಚ್ಚಾಗಿರುವುದು ಮತ್ತು ರಷ್ಯಾ ಕೂಡ ಉಕ್ರೇನ್ನ ಅತಿಕ್ರಮಣಕ್ಕೆ ಮುಂದಾಗಿರುವುದು ಈ ಸಂಘರ್ಷದ ಜ್ವಾಲೆಯನ್ನು ಹೆಚ್ಚಿಸುವಂತೆ ಮಾಡಿದೆ.
ಇನ್ನು ಶನಿವಾರ ರಷ್ಯಾ ಪರ ಪ್ರತ್ಯೇಕತವಾದಿ ಸರಕಾರದ ಮುಖ್ಯಸ್ಥ ಡೆನಿಸ್ ಪುಶಿಲಿನ್ ತಮ್ಮ ಎಲ್ಲ ಸೇನಾ ಪಡೆಗಳನ್ನು ಒಗ್ಗೂಡಿ ಸಜ್ಜಾಗಿರುವಂತೆ ಸೂಚಿಸಿದ್ದಾರೆ.
ಇದರ ನಡುವೆ ಅಮೇರಿಕಾ ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡಿದ್ದೇ ಆದಲ್ಲಿ ತಕ್ಕ ಬೆಲೆ ತೆರಬೇಕಾಗುತ್ತದೆ. ಅದರ ವಿರುದ್ಧ ಆರ್ಥಿಕ ದಿಗ್ಬಂಧನ ಹೇರುವುದು ಖಚಿತ ಎಂದು ಎಚ್ಚರಿಸಿದೆ.
ಇನ್ನು ಜರ್ಮನಿಯಲ್ಲಿ ನಡೆದ ಮ್ಯೂನಿಚ್ ಭದ್ರತ ಸಮಾವೇಶದಲ್ಲಿ ಮಾತನಾಡಿದ ಅಮೇರಿಕಾ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್, ಈ ವಿಚಾರದಲ್ಲಿ ನಾವು ಸ್ಪಷ್ಟವಾಗಿದ್ದೇವೆ, ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿದರೆ ಅಮೇರಿಕಾವು ತನ್ನ ಮಿತ್ರರಾಷ್ಟ್ರಗಳೊಂದಿಗೆ ಸೇರಿ ಹಿಂದೆಂದೂ ಕಂಡರಿಯದಂತಹ ಆರ್ಥಿಕ ದಿಗ್ಬಂಧನವನ್ನು ಹೇರಲಿವೆ ಎಂದಿದ್ದಾರೆ.