ಕೈವ್, ಫೆ 25 (DaijiworldNews/MS): ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಧಿಕೃತವಾಗಿ ಕಾರ್ಯಾಚರಣೆಗೆ ಆದೇಶಿಸಿದ ನಂತರ, ಉಕ್ರೇನ್ ಮೇಲೆ ರಷ್ಯಾ ಪೂರ್ಣ ಪ್ರಮಾಣದ ದಾಳಿ ಪ್ರಾರಂಭಿಸಿದ್ದು, ರಷ್ಯಾದ ಪಡೆಗಳು ತನ್ನ ವಾಯು, ಕ್ಷಿಪಣಿ ದಾಳಿಯೊಂದಿಗೆ ಉಕ್ರೇನ್ ನ ಉತ್ತರ,ಪೂರ್ವ, ದಕ್ಷಿಣದ ಗಡಿಯುದ್ದಕ್ಕೂ ದಾಳಿ ನಡೆಸುತ್ತಿದ್ದು, ಉಕ್ರೇನ್ ನ ಮಿಲಿಟರಿ ಸೌಲಭ್ಯಗಳನ್ನು ನಾಶಪಡಿಸುತ್ತಿದೆ.
ರಷ್ಯಾ ದಾಳಿ ಆರಂಭಿಸಿದಾಗಿನಿಂದ ಈವರೆಗೂ ಸೈನಿಕರು, ನಾಗರಿಕರು ಸೇರಿದಂತೆ 137 ಜನರು ಸಾವನ್ನಪ್ಪಿದ್ದು, ನೂರಾರು ಮಂದಿ ಗಾಯಗೊಂಡಿರುವುದಾಗಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಶುಕ್ರವಾರ ಮುಂಜಾನೆ ವೀಡಿಯೊ ಭಾಷಣದಲ್ಲಿ ತಿಳಿಸಿದ್ದಾರೆ. ಅಲ್ಲದೆ ಮೃತ ಸೈನಿಕರನ್ನು ಹೀರೋಗಳು ಎಂದು ಕರೆದಿದ್ದಾರೆ.
ಮಿಲಿಟರಿ ಮೇಲೆ ಮಾತ್ರ ದಾಳಿ ಮಾಡುವುದಾಗಿ ಹೇಳಿದ್ದ ರಷ್ಯಾವು ಇದೀಗ ಉಕ್ರೇನ್ ನ ನಾಗರಿಕ ತಾಣಗಳ ಮೇಲೂ ಸಹ ದಾಳಿ ನಡೆಸುತ್ತಿದೆ ರಷ್ಯಾ ಸೇನೆ ಜನರನ್ನು ಕೊಲ್ಲುತ್ತಿದೆ ಮತ್ತು ಶಾಂತಿಯುತ ನಗರಗಳು ಮಿಲಿಟರಿ ಟಾರ್ಗೆಟ್ ಆಗಿದೆ. ಇದು ರಷ್ಯಾದ ದೊಡ್ಡ ಕುತಂತ್ರ, ಎಂದಿಗೂ ಇದನ್ನು ಕ್ಷಮಿಸುವುದಿಲ್ಲ ಎಂದು ಝೆಲೆನ್ಸ್ಕಿ ಕಿಡಿಕಾರಿದ್ದಾರೆ
ರಷ್ಯಾದ ಪಡೆಗಳು ಉಕ್ರೇನ್ ನ ದಕ್ಷಿಣ ಕರಾವಳಿಯಲ್ಲಿ ಪ್ರವೇಶಿಸಿದೆ, ನಮ್ಮ ಸೈನಿಕರಿಂದ ಸುಮಾರು 50 ರಷ್ಯಾದ ಆಕ್ರಮಣಕಾರರು ಕೊಲ್ಲಲ್ಪಟ್ಟಿದ್ದಾರೆ ಎಂದು ಉಕ್ರೇನ್ ಹೇಳಿದೆ .