ವಿಶ್ವಸಂಸ್ಥೆ, ಫೆ 26 (DaijiworldNews/MS): ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ರಷ್ಯಾವು ಉಕ್ರೇನ್ ವಿರುದ್ಧ ಯುದ್ಧ ಸಾರಿರುವ ನಿರ್ಣಯವನ್ನು ಬಲವಾಗಿ ಖಂಡಿಸಲಾಯಿತು. ಈ ಮಧ್ಯೆ ಉಕ್ರೇನ್ ಮೇಲಿನ ದಾಳಿ ನಿಲ್ಲಿಸುವಂತೆ ಮತ್ತು ರಷ್ಯಾ ತನ್ನ ಎಲ್ಲಾ ಪಡೆಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ವಿಶ್ವಸಂಸ್ಥೆ ಭದ್ರತಾ ಮಂಡಳಿ (ಯುಎನ್ ಸೆಕ್ಯುರಿಟಿ ಕೌನ್ಸಿಲ್) ಶುಕ್ರವಾರ ಅಮೆರಿಕ ಮತ್ತು ಅಲ್ಬೇನಿಯಾ ಪ್ರಾಯೋಜಿಸಿದ ಕರಡು ನಿರ್ಣಯದ ಮೇಲೆ ಮತ ಚಲಾಯಿಸಲಾಯಿತು.
ವಿಶ್ವಸಂಸ್ಥೆಯಲ್ಲಿ ಕಾಯಂ ಸದಸ್ಯತ್ವ ಮತ್ತು ವಿಟೋ ಅಧಿಕಾರ ಹೊಂದಿರುವ ರಷ್ಯಾ ವಿರುದ್ಧ ಮತಕ್ಕೆ ಹಾಕಲಾಯಿತು. ಪೋಲೆಂಡ್, ಇಟಲಿ, ಜರ್ಮನಿ, ಎಸ್ಟೋನಿಯಾ, ಲಕ್ಸೆಂಬರ್ಗ್ ಮತ್ತು ನ್ಯೂಜಿಲೆಂಡ್ ಸೇರಿದಂತೆ ಹಲವಾರು ರಾಷ್ಟ್ರಗಳು ಈ ನಿರ್ಣಯವನ್ನು ಬೆಂಬಲಿಸಿವೆ.ಭಾರತ, ಚೀನಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಮತದಾನದಿಂದ ದೂರ ಉಳಿದಿವೆ.
ಆದರೆ ಭದ್ರತಾ ಮಂಡಳಿಯ ಖಾಯಂ ಸದಸ್ಯ ರಾಷ್ಟ್ರವಾಗಿರುವ ರಷ್ಯಾ, ತನ್ನ ವೀಟೋ ಅಧಿಕಾರದಿಂದ ನಿರ್ಣಯವನ್ನು ಸಹಜವಾಗಿಯೇ ತಡೆದಿದೆ.
ವಿಶ್ವಸಂಸ್ಥೆ ಭದ್ರತಾ ಮಂಡಳಿಯ 15 ಸದಸ್ಯರಲ್ಲಿ 11 ಸದಸ್ಯರು ಉಕ್ರೇನ್ ವಿರುದ್ಧ ರಷ್ಯಾದ ಆಕ್ರಮಣವನ್ನು ಖಂಡಿಸುವ ನಿರ್ಣಯದ ಪರವಾಗಿ ಮತ ಚಲಾಯಿಸಿದವು.
ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿ ಟಿ.ಎಸ್.ತಿರುಮೂರ್ತಿ ಮಾತನಾಡಿ," ಹಿಂಸೆ ಮತ್ತು ದ್ವೇಷವನ್ನು ತಕ್ಷಣವೇ ನಿಲ್ಲಿಸುವಂತೆ ಒತ್ತಾಯಿಸಿದರು. ಸಮಸ್ಯೆಗಳನ್ನು ಇತ್ಯರ್ಥಗೊಳಿಸಲು ಮಾತುಕತೆಯ ಅಗತ್ಯವನ್ನು ಒತ್ತಿ ಹೇಳಿದರು. ರಾಜತಾಂತ್ರಿಕತೆಯ ಹಾದಿ ಕೈಬಿಟ್ಟು ಯುದ್ಧದ ಮಾರ್ಗ ಹಿಡಿದಿರುವುದು ವಿಷಾದದ ಸಂಗತಿ. ನಾವು ಮಾತುಕತೆಗೆ ಹಿಂತಿರುಗಬೇಕು. ಈ ಎಲ್ಲಾ ಕಾರಣಗಳಿಗಾಗಿ, ಭಾರತವು ಈ ನಿರ್ಣಯದಿಂದ ದೂರವಿರಲು ನಿರ್ಧರಿಸಿದೆ’ ಎಂದು ತಿರುಮೂರ್ತಿ ಕೌನ್ಸಿಲ್ನಲ್ಲಿ ಭಾರತದ ಮತದ ವಿವರಣೆಯಲ್ಲಿ ಹೇಳಿದರು.