ಮಾಸ್ಕೋ, ಫೆ 27 (DaijiworldNews/KP): ಉಕ್ರೇನ್ ಬಳಿಕ ಫಿನ್ಲ್ಯಾಂಡ್ ಮತ್ತು ಸ್ವೀಡನ್ನ ಮೇಲೂ ರಷ್ಯಾ ಮಿಲಿಟರಿ ಕಾರ್ಯಾಚರಣೆಯ ಬೆದರಿಕೆ ಹಾಕಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಫಿನ್ಲ್ಯಾಂಡ್ ಮತ್ತು ಸ್ವೀಡನ್ ರಾಷ್ಟ್ರಗಳು ನ್ಯಾಟೋಗೆ ಸೇರ್ಪಡೆಯಾಗುವ ಸಂಬಂಧ ರಷ್ಯಾ ಬೆದರಿಕೆ ಹಾಕಿದ್ದು, ಈ ಬೆಳವಣಿಗೆಗಳ ಬಳಿಕ, ಯುಎಸ್ ಅಧ್ಯಕ್ಷ ಜೋ ಬೈಡನ್, ನ್ಯಾಟೋದ ತೆರೆದ ಬಾಗಿಲು ನೀತಿಗೆ ಒತ್ತು ನೀಡುವುದಾಗಿ ಹೇಳಿದ್ದಾರೆ.
ವಾಸ್ತವವಾಗಿ ಸೇಂಟ್ ಪೀಟರ್ಸ್ ಬರ್ಗ್ ರಷ್ಯಾದ ವ್ಯಾಪಾರ ರಾಜಧಾನಿ ಮತ್ತು ಬಿಲಿಯನೇರ್ ಗಳ ನಗರವಾಗಿದ್ದು,ಇದು ಫಿನ್ಲ್ಯಾಂಡ್ ಗಡಿಯ ಪಕ್ಕದಲ್ಲಿದೆ. ಫಿನ್ಲ್ಯಾಂಡ್ ನ್ಯಾಟೋದ ಸದಸ್ಯತ್ವ ಪಡೆದರೆ ರಷ್ಯಾದ ಉತ್ತರ ಮುಂಭಾಗಕ್ಕೆ ಸಮಸ್ಯೆ ಕಟ್ಟಿಟ್ಟಬುತ್ತಿ. ಇದರಿಂದ ಭವಿಷ್ಯದ ದೃಷ್ಟಿಯಿಂದ ರಷ್ಯಾದ ಉದ್ವಿಗ್ನತೆಗೆ ಕಾರಣವಾಗುವ ನಿಟ್ಟಿನಲ್ಲಿ ಫಿನ್ಲ್ಯಾಂಡ್ಗೆ ಮಾತ್ರವಲ್ಲದೆ ಸ್ವೀಡನ್ನ ಮೇಲೂ ರಷ್ಯಾ ಮಿಲಿಟರಿ ಕಾರ್ಯಾಚರಣೆಯ ಬೆದರಿಕೆ ಹಾಕಿದೆ.
ರಷ್ಯಾದ ವಿದೇಶಾಂಗ ಸಚಿವಾಲಯದ ವಕ್ತಾರ ಮಾರಿಯಾ ಜಖರೋವಾ, ಫಿನ್ಲ್ಯಾಂಡ್ ಮತ್ತು ಸ್ವೀಡನ್ ತಮ್ಮ ಭದ್ರತೆಗೋಸ್ಕರ ಇತರ ರಾಷ್ಟ್ರಗಳ ಭದ್ರತೆಗೆ ಹಾನಿ ಉಂಟು ಮಾಡುವ ಆಧಾರದ ಮೇಲೆ ನೀತಿ ರೂಪಿಸಬಾರದು ಎಂದು ಹೇಳಿದ್ದಾರೆ.
ಅಲ್ಲದೆ ಈ ದೇಶಗಳು ನ್ಯಾಟೋಗೆ ಸೇರಿದರೆ ರಷ್ಯಾ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಹೇಳಿರುವ ಅವರು, ಇದರ ಹೊರತಾಗಿಯೂ ಈ ರಾಷ್ಟ್ರಗಳು ನ್ಯಾಟೋ ಸೇರುವ ಇಚ್ಛೆ ವ್ಯಕ್ತಪಡಿಸಿದರೆ ಮಿಲಿಟರಿ ಮತ್ತು ರಾಜಕೀಯ ಪರಿಣಾಮ ಎದುರಿಸಬೇಕಾಗಬಹುದು ಎಂದು ಹೇಳಿದ್ದಾರೆ.
ಇದೇ ವೇಳೆ ಫಿನ್ಲೆಂಡ್ ಪ್ರಧಾನಿ ಸನ್ನಾ ಮರಿನ್, ರಷ್ಯಾ ಇದುವರೆಗೆ ನಮ್ಮ ದೇಶದ ಮೇಲೆ ಯಾವುದೇ ರೀತಿಯ ರಾಜಕೀಯ ಅಥವಾ ಮಿಲಿಟರಿ ಕ್ರಮ ಕೈಗೊಂಡಿಲ್ಲ ಎಂದು ಹೇಳಿದ್ದಾರೆ.
ಇನ್ನೊಂದೆಡೆ ಸ್ವೀಡನ್ ಪ್ರಧಾನಿ ಮ್ಯಾಗ್ಡಲೀನಾ ಆಂಡರ್ಸನ್ ರಷ್ಯಾದ ಕ್ರಮಗಳು ಯುರೋಪಿಯನ್ ಭದ್ರತಾ ವ್ಯವಸ್ಥೆಯ ಮೇಲೆ ದಾಳಿಯಾಗಿದೆ. ಉಕ್ರೇನ್ನಲ್ಲಿನ ಪರಿಸ್ಥಿತಿಗೆ ರಷ್ಯಾ ಮಾತ್ರ ಕಾರಣ ಎಂದು ಹೇಳಿದ್ದಾರೆ. ಅಲ್ಲದೆ ನ್ಯಾಟೋ ಶೃಂಗಸಭೆಯಲ್ಲಿ ಫಿನ್ಲ್ಯಾಂಡ್ ಮತ್ತು ಸ್ವೀಡನ್, ರಷ್ಯಾ ಸೇನೆ ಉಕ್ರೇನ್ ನಲ್ಲಿ ನುಗ್ಗಿರುವುದನ್ನು ಬಲವಾಗಿ ಖಂಡಿಸಿದ್ದಾರೆ.