ಕೀವ್, ಮಾ 01 (DaijiworldNews/HR): ರಷ್ಯಾ- ಉಕ್ರೇನ್ ನಡುವಿನ ಯುದ್ಧ ಐದನೇ ದಿನವೂ ಮುಂದುವರಿದಿದ್ದು, ರಷ್ಯಾವು ಕೇವಲ ಸೈನಿಕರ ಮೇಲೆ ಮಾತ್ರವಲ್ಲದೆ ಜನವಸತಿ ಪ್ರದೇಶಗಳಲ್ಲೂ ರಷ್ಯಾ ಮದ್ದುಗುಂಡುಗಳು ಸದ್ದು ಮಾಡುತ್ತಿದ್ದು, ರಷ್ಯಾದ ಫಿರಂಗಿ ದಾಳಿಗೆ ಉಕ್ರೇನ್ ನ 70ಕ್ಕೂ ಹೆಚ್ಚು ಸೈನಿಕರು ಬಲಿಯಾಗಿದ್ದಾರೆ.
ಖಾರ್ಕಿವ್ ಮತ್ತು ಕೀವ್ ನಗರಗಳ ನಡುವಿನ ಓಖ್ಟಿರ್ಕಾ ಪಟ್ಟಣದಲ್ಲಿರುವ ಮಿಲಿಟರಿ ಬೇಸ್ ಮೇಲೆ ರಷ್ಯಾ ಫಿರಂಗಿ ದಾಳಿ ನಡೆಸಿದ್ದು, ವಾಯು ದಾಳಿ ಭೀತಿಯಿಂದ ಉಕ್ರೇನ್ ನಗರಗಳಾದ ವೊಲಿನ್, ಟೆರ್ನೋಪಿಲ್ ಮತ್ತು ರಿವ್ನೆ ಪ್ರದೇಶಗಳಲ್ಲಿ ಏರ್ ರೈಡ್ ಸೈರನ್ ಮೊಳಗಿಸಲಾಗಿದೆ.
ಇನ್ನು ಇಲ್ಲಿಯವರೆಗೆ ರಷ್ಯಾವು 350 ಕ್ಕೂ ಹೆಚ್ಚು ಉಕ್ರೇನ್ ನಾಗರಿಕರನ್ನು ಹತ್ಯೆಮಾಡಿದ್ದು, 40 ಮೈಲಿ ಉದ್ದದ ಬೆಂಗಾವಲು ಪಡೆಯು ಉಕ್ರೇನ್ ರಾಜಧಾನಿ ಕೀವ್ ನತ್ತ ಸಾಗುತ್ತಿರುವುದನ್ನು ಇತ್ತೀಚಿನ ಉಪಗ್ರಹ ಚಿತ್ರಗಳು ಬಹಿರಂಗಪಡಿಸಿವೆ.