ವಾಷಿಂಗ್ಟನ್ ,ಮಾ 02 (DaijiworldNews/MS): ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಓರ್ವ ಸರ್ವಾಧಿಕಾರಿಯಾಗಿದ್ದು, ಪುಟಿನ್ ಯುದ್ಧಭೂಮಿಯಲ್ಲಿ ಲಾಭವನ್ನು ಗಳಿಸಬಹುದು. ಆದರೆ ಭವಿಷ್ಯದಲ್ಲಿ ಮುಂದೊಂದು ದಿನ ತಕ್ಕ ಬೆಲೆಯನ್ನು ತೆರಬೇಕಾಗುತ್ತದೆ ಎಂದು ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಅವರು ಎಚ್ಚರಿಕೆ ನೀಡಿದ್ದಾರೆ.
ಉಕ್ರೇನ್ ವಿರುದ್ಧ ಸಮರ ಸಾರಿರುವ ರಷ್ಯಾ ಕ್ರಮಗಳನ್ನು ಖಂಡಿಸಿದ ಜೋ ಬೈಡನ್ ಪುಟಿನ್ ಅವರ ಕ್ರಮಗಳು ಪೂರ್ವಯೋಜಿತವಾಗಿದ್ದು, ಅಪ್ರಚೋದಿತವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯೂಕ್ರೇನ್ ಮೇಲೆ ತನ್ನ ದೇಶದ ಸೇನೆಯನ್ನು ಛೂ ಬಿಟ್ಟ ವ್ಲಾದಿಮಿರ್ ಪುಟಿನ್ರನ್ನು ಜಗತ್ತು ಪ್ರತ್ಯೇಕವಾಗಿ ಇರಿಸಿದೆ. ಅದರ ಮೇಲೆ ಅನೇಕ ರಾಷ್ಟ್ರಗಳು ಹೇರಿರುವ ವಿನಾಶಕಾರಿ ನಿರ್ಬಂಧಗಳು ರಷ್ಯಾದ ಆರ್ಥಿಕ ಬಲವನ್ನು ಕುಸಿಯುವಂತೆ ಮಾಡುತ್ತದೆ. ಅಮೆರಿಕದ ಪಡೆಗಳು ಉಕ್ರೇನ್ ನೆಲದಲ್ಲಿ ರಷ್ಯಾದ ವಿರುದ್ದ ಹೋರಾಡುತ್ತಿಲ್ಲ. ಆದರೆ ನಮ್ಮ ನ್ಯಾಟೋ ಮಿತ್ರರಾಷ್ಟ್ರಗಳನ್ನು ರಕ್ಷಿಸಲು ಮತ್ತು ಪುಟಿನ್ ಪಶ್ಚಿಮಕ್ಕೆ ಚಲಿಸುವುದನ್ನು ತಡೆಯಲು ಪೋಲೆಂಡ್, ರೊಮೇನಿಯಾ, ಲಾಟ್ವಿಯಾ, ಲಿಥುವೇನಿಯಾ ಮತ್ತು ಎಸ್ಟೋನಿಯಾ ಸೇರಿದಂತೆ ನ್ಯಾಟೋ ದೇಶಗಳನ್ನು ರಕ್ಷಿಸಲು ಸಿದ್ಧಗೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಯೂರೋಪ್ ಅನ್ನು ಇಭ್ಭಾಗ ಮಾಡಬಹುದು ಎಂದು ಪುಟಿನ್ ತಿಳಿಸಿದ್ದಾರೆ. ಆದರೆ, ಅದು ತಪ್ಪು. ಪ್ರಜಾಪ್ರಭುತ್ವ ಮತ್ತು ನಿರಂಕುಶಪ್ರಭುತ್ವದ ನಡುವಿನ ಯುದ್ಧದಲ್ಲಿ ಪ್ರಜಾಪ್ರಭುತ್ವವೂ ಉದಯವಾಗುತ್ತದೆ ಮತ್ತು ಇಡೀ ವಿಶ್ವವು ಶಾಂತಿ ಮತ್ತು ಭದ್ರತೆಯನ್ನು ಆಯ್ಕೆ ಮಾಡಿಕೊಂಡಿರುವುದು ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ.