ನವದೆಹಲಿ, ಮಾ 02 (DaijiworldNews/DB): ಖಾರ್ಕಿವ್ ಮತ್ತು ಪೂರ್ವ ಯುಕ್ರೇನ್ ಭಾಗಗಳಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವುದಕ್ಕೆ ಸಂಬಂಧಿಸಿದಂತೆ ನಾವು ಈಗಾಗಲೇ ಭಾರತೀಯ ಅಧಿಕಾರಿ ವರ್ಗದೊಂದಿಗೆ ಸಂಪರ್ಕದಲ್ಲಿದ್ದೇವೆ ಎಂಬುದಾಗಿ ಭಾರತಕ್ಕೆ ರಷ್ಯಾದ ನಿಯೋಜಿತ ರಾಯಭಾರಿ ಡೆನಿಸ್ ಅಲಿಪೋವ್ ತಿಳಿಸಿದ್ದಾರೆ.
ಭಾರತವು ಸದ್ಯದ ಬಿಕ್ಕಟ್ಟನ್ನು ಅರ್ಥೈಸಿಕೊಂಡಿದೆ. ರಷ್ಯಾದ ಪ್ರದೇಶದ ಮೂಲಕ ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರನ್ನು ತುರ್ತು ಸ್ಥಳಾಂತರಿಸಲು ನಾವು ಭಾರತದ ವಿನಂತಿಯನ್ನು ಸ್ವೀಕರಿಸಿದ್ದೇವೆ. ಈ ಮನವಿಯ ಮೇರೆಗೆ ಖಾರ್ಕಿವ್ ಮತ್ತು ಪೂರ್ವ ಉಕ್ರೇನ್ನ ಇತರ ಪ್ರದೇಶಗಳಲ್ಲಿ ಸಿಲುಕಿರುವ ಭಾರತೀಯರ ಸುರಕ್ಷಿತ ಸ್ಥಳಾಂತರಕ್ಕೆ ನಾವು ಭಾರತದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದವರು ಮಾಹಿತಿ ನೀಡಿದ್ದಾರೆ.
ಭಾರತವು ನಮ್ಮ ಮಿತ್ರ ರಾಷ್ಟ್ರವಾಗಿದೆ. ವಿಶ್ವಸಂಸ್ಥೆಯಲ್ಲಿ ಭಾರತವು ಸಮತೋಲಿತ ನಡೆಯನ್ನು ಕಾಯ್ದುಕೊಂಡಿರುವುದಕ್ಕೆ ನಾವು ಆಭಾರಿಯಾಗಿದ್ದೇವೆ ಎಂದು ಇದೇ ವೇಳೆ ಅವರು ತಿಳಿಸಿದರು.