ಕೈವ್, ಮಾ 04 (DaijiworldNews/MS): ರಷ್ಯಾ ದೇಶವೂ "ಪರಮಾಣು ಭಯೋತ್ಪಾದನೆ" ಯನ್ನು ಮಾಡುತ್ತಿದ್ದು ಚೆರ್ನೋಬಿಲ್ ದುರಂತವನ್ನು ಪುನರಾವರ್ತಿಸಲು ಬಯಸಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಆರೋಪಿಸಿದ್ದಾರೆ.
ರಷ್ಯಾದ ಪಡೆಗಳು ಯೂರೋಪ್ ಖಂಡದ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರದ ಮೇಲೆ ದಾಳಿ ಮಾಡಿದ ಪರಿಣಾಮ ಬೆಂಕಿ ಕಾಣಿಕೊಂಡ ಬಳಿಕ ತಮ್ಮ ಕಚೇರಿ ಬಿಡುಗಡೆ ಮಾಡಿದ ವೀಡಿಯೊ ಸಂದೇಶದಲ್ಲಿ ಮಾತನಾಡಿದ ಅವರು, " ಇತಿಹಾಸದಲ್ಲಿ ರಷ್ಯಾ ಹೊರತುಪಡಿಸಿ ಬೇರೆ ಯಾವುದೇ ದೇಶಗಳು ಪರಮಾಣು ವಿದ್ಯುತ್ ಘಟಕಗಳ ಮೇಲೆ ಗುಂಡಿನ ದಾಳಿ ನಡೆಸಿಲ್ಲ. ಇದೇ ಮೊದಲ ಬಾರಿಗೆ ಮಾನವಕುಲದ ಇತಿಹಾಸದಲ್ಲಿ ಇಂತಹದ್ದೊಂದು ಉಗ್ರಕೃತ್ಯ ದಾಖಲಾಗಿದೆ. ಭಯೋತ್ಪಾದಕ ದೇಶ ಈಗ ಪರಮಾಣು ಭಯೋತ್ಪಾದನೆಯನ್ನು ನಡೆಸುತ್ತಿದೆ ಎಂದು ಝೆಲೆನ್ಸ್ಕಿ ಆರೋಪಿಸಿದ್ದಾರೆ.
ಝೆಲೆನ್ಸ್ಕಿ ಅವರ ಪ್ರಕಾರ, " ಆಗ್ನೇಯ ಭಾಗದಲ್ಲಿರುವ ಕೈಗಾರಿಕಾ ನಗರವಾದ ಝಪೋರಿಝಿಯಾದಲ್ಲಿನ ಸ್ಥಾವರವು ದೇಶದ ಪರಮಾಣು ಶಕ್ತಿಯ ಅಂದಾಜು 40 ಪ್ರತಿಶತವನ್ನು ಪೂರೈಸುತ್ತದೆ . ಅಲ್ಲದೆ ಉಕ್ರೇನ್ನ 15 ರಿಯಾಕ್ಟರ್ಗಳಲ್ಲಿ ಆರು ರಿಯಾಕ್ಟರ್ಗಳನ್ನು ಹೊಂದಿದೆ".
ರಷ್ಯಾ ದಾಳಿಯೂ ಸ್ಥಾವರದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ ಮತ್ತು ವಿಕಿರಣ ಮಟ್ಟಗಳು ಸಾಮಾನ್ಯವಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ವಿಶ್ವಸಂಸ್ಥೆಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.