ಕೀವ್, ಮಾ 04 (DaijiworldNews/DB): ಉಕ್ರೇನ್ನಲ್ಲಿರುವ ಯೂರೊಪ್ನ ಅತಿದೊಡ್ಡ ಪರಮಾಣು ಸ್ಥಾವರದ ಮೇಲೆ ಭೀಕರ ಶೆಲ್ ದಾಳಿ ನಡೆಸಿದ್ದ ರಷ್ಯಾ ಪಡೆ ಇದೀಗ ಝೆಪೊರಿಝ್ಝಿಯಾ ಅಣುವಿದ್ಯುತ್ ಸ್ಥಾವರವನ್ನು ವಶಪಡಿಸಿಕೊಂಡಿದೆ.
ಉಕ್ರೇನ್-ರಷ್ಯಾ ನಡುವಿನ ಯುದ್ದ ಇಂದು 9ನೇ ದಿನಕ್ಕೆ ಕಾಲಿಟ್ಟಿದೆ. ಈಗಾಗಲೇ ಉಕ್ರೇನ್ ನ ಹಲವು ಪ್ರದೇಶಗಳನ್ನು ವಶಪಡಿಸಿಕೊಂಡಿರುವ ರಷ್ಯಾ ಸೇನೆ ಶುಕ್ರವಾರ ಉಕ್ರೇನ್ ನ ದಕ್ಷಿಣದಲ್ಲಿರುವ ಝೆಪೊರಿಝ್ಝಿಯಾ ಪರಮಾಣು ಸ್ಥಾವರವನ್ನು ತನ್ನದಾಗಿಸಿಕೊಂಡಿದೆ.
ಝೆಪೊರಿಝ್ಝಿಯಾ ಅಣುವಿದ್ಯುತ್ ಕೇಂದ್ರ ಸ್ಫೋಟಗೊಂಡರೆ ಚೆರ್ಲೋಬಿಲ್ ದುರಂತದ ಹತ್ತು ಪಟ್ಟು ದೊಡ್ಡ ಸ್ಫೋಟವಾಗಬಹುದು ಎಂದು ಉಕ್ರೇನ್ ವಿದೇಶಾಂಗ ವ್ಯವಹಾರಗಳ ಸಚಿವ ಡೈಟ್ರೊ ಕುಲೆಬಾ ಕೆಲ ಸಮಯದ ಹಿಂದೆ ಟ್ವೀಟ್ ಮಾಡಿದ್ದರು.
ಈ ನಗರದಲ್ಲಿ 50 ಸಾವಿರಕ್ಕೂ ಅಧಿಕ ಜನಸಂಖ್ಯೆ ಇದ್ದು, ಸ್ಥಾವರ ಸ್ಪೋಟಗೊಂಡರೆ ಉಕ್ರೇನ್ನ 15 ಅಣು ರಿಯಾಕ್ಟರ್ಗಳಿಗೆ ಹಾನಿ ಉಂಟಾಗಬಹುದು ಎಂದು ವಿಶ್ವಸಂಸ್ಥೆಯ ಅಣ್ವಸ್ತ್ರ ಕಣ್ಗಾವಲು ಸಂಸ್ಥೆ ಎಚ್ಚರಿಕೆ ನೀಡಿತ್ತು. ಎಚ್ಚರಿಕೆ ಹೊರತಾಗಿಯೂ ರಷ್ಯಾ ದಾಳಿ ನಡೆಸಿ ಸ್ಥಾವರವನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ.