ವಾಷಿಂಗ್ಟನ್ ಮಾ 04 (DaijiworldNews/MS): ರಷ್ಯಾದ ಪಡೆಗಳು ಉಕ್ರೇನ್ನಲ್ಲಿ ಮುನ್ನಡೆಯುತ್ತಿದ್ದಂತೆ, ಅಮೆರಿಕಾದ ಹಿರಿಯ ಸೆನೆಟರ್ ಲಿಂಡ್ಸೆ ಗ್ರಹಾಂ ಅವರು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಹತ್ಯೆ ಮಾಡಬೇಕು ಎಂದು ಕರೆ ನೀಡಿದ್ದಾರೆ.
ಟಿ.ವಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, " ರಷ್ಯಾ-ಉಕ್ರೇನ್ ಯುದ್ಧ ಕೊನೆಗೊಳ್ಳುವುದು ಹೇಗೆ, ರಷ್ಯಾದಲ್ಲಿ ಯಾರಾದರೊಬ್ಬರು ಈ ವಿಚಾರದಲ್ಲಿ ದಿಟ್ಟ ಕ್ರಮ ಕೈಗೊಂಡು ಅಧ್ಯಕ್ಷರನ್ನು ಮುಗಿಸಿಬಿಡಬೇಕು ಎಂದು ಫಾಕ್ಸ್ ನ್ಯೂಸ್ ಟಿವಿಯ ನಿರೂಪಕ ಸೀನ್ ಹ್ಯಾನಿಟಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಟಿ.ವಿ ಸಂದರ್ಶನದ ಬಳಿಕ ಅವರು ತಮ್ಮ ವೈಯಕ್ತಿಕ ಟ್ವಿಟರ್ ಖಾತೆಯಲ್ಲೂ ಸರಣಿ ಟ್ವೀಟ್ ಮಾಡಿ ಇದೇ ಅಭಿಪ್ರಾಯ ಕಂಚಿಕೊಂಡಿದ್ದಾರೆ. ‘ಇದನ್ನು ಸರಿಪಡಿಸಬೇಕಾದವರು ರಷ್ಯಾದ ಜನರು ಮಾತ್ರ’ ಎಂದು ಅವರು ಬರೆದುಕೊಂಡಿದ್ದಾರೆ. ‘ರಷ್ಯಾದಲ್ಲಿ ಯಾರಾದರೂ ಬ್ರೂಟಸ್ನಂಥವರು ಇದ್ದಾರೆಯೇ?’ ಎಂದು ಅವರು ಪ್ರಶ್ನೆ ಮಾಡಿದ್ದಾರೆ. (ರೋಮನ್ ಆಡಳಿತಗಾರ ಜೂಲಿಯಸ್ ಸೀಸರ್ನ ಹಂತಕರಲ್ಲಿ ಒಬ್ಬನನ್ನು ಉಲ್ಲೇಖಿಸಿ ಸೆನೆಟರ್ ಲಿಂಡ್ಸೆ ಗ್ರಹಾಂ ಕೇಳಿದ್ದಾರೆ.)
ರಿಪಬ್ಲಿಕನ್ ಪಕ್ಷದವರಾದ ಲಿಂಡ್ಸೆ, ಅಮೆರಿಕ ಕಾಂಗ್ರೆಸ್ನಲ್ಲಿ 20 ವರ್ಷ ಸೇವೆ ಸಲ್ಲಿಸಿದ್ದಾರೆ. ಒಂದೊಮ್ಮೆ ಅಧ್ಯಕ್ಷ ಟ್ರಂಪ್ಗೆ ಆತ್ಮೀಯರಾಗಿದ್ದ ಅವರು, 2016ರ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಪಕ್ಷದ ಪ್ರಾಥಮಿಕ ಸ್ಪರ್ಧಿಯಾಗಿದ್ದರು. ನಂತರ ಅವರು ನಾಮಪತ್ರ ಹಿಂಪಡೆದಿದ್ದರು.