ಮಾಸ್ಕೋ, ಮಾ 05 (DaijiworldNews/MS): ಉಕ್ರೇನ್ ಸಂಘರ್ಷಕ್ಕೆ ಸಂಬಂಧಿಸಿದಂತೆ ತಾರತಮ್ಯ ತೋರಿದೆ ಎಂದು ಆರೋಪಿಸಿರುವ ರಷ್ಯಾದ ಮಾಧ್ಯಮ ನಿಯಂತ್ರಕ ’ರೋಸ್ಕೊಮ್ನಾಡ್ಜೋರ್ ’ಸಾಮಾಜಿಕ ಮಾಧ್ಯಮ ದೈತ್ಯ ಫೇಸ್ಬುಕ್ ಹಾಗೂ ಟ್ವಿಟರ್ ಮೇಲೆ ನಿಷೇಧ ಹೇರಿದೆ. ಇದಲ್ಲದೆ ಜೊತೆಗೆ ಬಿಬಿಸಿ, ಆ್ಯಪಲ್ ಗೂಗಲ್ ಆ್ಯಪ್ ಸ್ಟೋರ್, ಯುಎಸ್ ಸರ್ಕಾರದ ಅನುದಾನಿತ ವಾಯ್ಸ್ ಆಫ್ ಅಮೇರಿಕಾ ಮತ್ತು ರೇಡಿಯೊ ಫ್ರೀ ಯುರೋಪ್ / ರೇಡಿಯೋ ಲಿಬರ್ಟಿ, ಜರ್ಮನ್ ಬ್ರಾಡ್ಕಾಸ್ಟರ್ ಡಾಯ್ಚ್ ವೆಲ್ಲೆ ಮತ್ತು ಲಾಟ್ವಿಯಾ ಮೂಲದ ವೆಬ್ಸೈಟ್ ಮೆಡುಜಾ ಮೇಲೂ ನಿರ್ಬಂಧ ಹೇರಲಾಗಿದೆ.
ಉಕ್ರೇನ್ ಸಂಘರ್ಷದ ವರದಿಗೆ ಸಂಬಂಧಿಸಿದಂತೆ ರಷ್ಯಾ ಮಾಧ್ಯಮಗಳ ಮೇಲೆ ಫೇಸ್ಬುಕ್ ಹಾಗೂ ಟ್ವಿಟರ್ ನಿರ್ಬಂಧವನ್ನು ಹೇರಿತ್ತು. ಈ ತಾರತಮ್ಯ ಧೋರಣೆಯನ್ನು ಖಂಡಿಸಿರುವ ರಷ್ಯಾ, ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.
ರಷ್ಯಾ ಸರ್ಕಾರ ನಿಷೇಧಿಸಿದ ವಿಷಯವನ್ನು ಅಳಿಸಲು ಟ್ವಿಟರ್ ವಿಫಲವಾಗಿದೆ ಎಂದು ಸಾಮಾಜಿಕ ಮಾಧ್ಯಗಳ ವಾಚ್ಡಾಗ್ ’ರೋಸ್ಕೊಮ್ನಾಡ್ಜೋರ್ ’ ಆರೋಪಿಸಿದೆ.
ಏತನ್ಮಧ್ಯೆ ಉಕ್ರೇನ್ ಯುದ್ಧಕ್ಕೆ ಸಂಬಂಧಪಟ್ಟಂತೆ ನಕಲಿ ಸುದ್ದಿ ಹರಡುವವರ ವಿರುದ್ಧ ಕಠಿಣ ಕ್ರಮಕ್ಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆದೇಶಿಸಿದ್ದಾರೆ. ಯುದ್ಧದ ಕುರಿತಾಗಿ ರಷ್ಯಾದ ವಿರುದ್ಧ ತಪ್ಪು ಮಾಹಿತಿ ನೀಡಿದವರಿಗೆ 15 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಕಾನೂನಿಗೆ ಸಹಿ ಹಾಕಿದ್ದಾರೆ.