ಕೀವ್, ಮಾ 05 (DaijiworldNews/DB): ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಕೀವ್ ತೊರೆದು ಪೋಲೆಂಡ್ ಗೆ ಪಲಾಯನ ಮಾಡಿದ್ದಾರೆ ಎಂಬ ರಷ್ಯಾ ರಾಜಕಾರಣಿಯೋರ್ವರ ಆರೋಪಕ್ಕೆ ಝೆಲೆನ್ಸ್ಕಿ ವೀಡಿಯೋ ಮುಖಾಂತರ ತಿರುಗೇಟು ನೀಡಿದ್ದಾರೆ. ತಾವು ಉಕ್ರೇನ್ ಅಧಿಕಾರಿಗಳೊಂದಿಗೆ ಕೀವ್ ನ ಕಚೇರಿಯಲ್ಲಿ ಕಾರ್ಯನಿರತವಾಗಿರುವ ವೀಡಿಯೋವೊಂದನ್ನು ಸಾಮಾಜಿಕ ತಾಣಗಳಲ್ಲಿ ಹರಿಯಬಿಟ್ಟಿದ್ದಾರೆ.
’ನಾನು ಕಚೇರಿಯಲ್ಲಿ ಸಹದ್ಯೋಗಿಗಳೊಂದಿಗೆ ಕಾರ್ಯನಿರತನಾಗಿದ್ದೇನೆ. ನಾನೂ ಸಹಿತ ಯಾರೊಬ್ಬರೂ ಉಕ್ರೇನ್ ತೊರೆದು ಪಲಾಯನ ಮಾಡಿಲ್ಲ’ ಎಂದು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ವೀಡಿಯೋದಲ್ಲಿ ಅವರು ಸ್ಪಷ್ಟಪಡಿಸಿದ್ದಾರೆ. ರಷ್ಯಾ-ಉಕ್ರೇನ್ ನಡುವೆ ಯುದ್ಧ ಏರ್ಪಟ್ಟ ಬಳಿಕ ಅವರು ವೀಡಿಯೋದಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದು ಎರಡನೇ ಬಾರಿಯಾಗಿದ್ದು, ರಷ್ಯಾ ಮಾಧ್ಯಮಗಳು ಬಿತ್ತರಿಸುತ್ತಿರುವ ಸುದ್ದಿಗಳು ಸುಳ್ಳಾಗಿವೆ ಎಂದು ತಿಳಿಸಿದ್ದಾರೆ.
"ಉಕ್ರೇನ್ ಅಧ್ಯಕ್ಷರು ಪೋಲೆಂಡ್ ಗೆ ಪಲಾಯನ ಮಾಡಿದ್ದು, ಸದ್ಯ ಅವರು ಉಕ್ರೇನ್ ಸಂಸತ್ ಸದಸ್ಯರ ಸಂಪರ್ಕಕ್ಕೆ ಸಿಗುತ್ತಿಲ್ಲ’ ಎಂದು ರಷ್ಯಾದ ರಾಜಕಾರಣಿ ವ್ಯಚೆಸ್ಲೇವ್ ವೊಲೋಡಿನ್ ಈ ಹಿಂದೆ ಆರೋಪಿಸಿದ್ದರು. ಇದನ್ನು ರಷ್ಯಾ ಮಾಧ್ಯಮಗಳು ಸುದ್ದಿ ಬಿತ್ತರಿಸಿದ್ದವು. ರಷ್ಯಾ ಸಂಸತ್ ಸದಸ್ಯರ ಖಾಸಗಿ ಸಭೆಗೂ ಮುನ್ನವೇ ಅವರು ದೇಶ ತೊರೆದಿರುವುದಾಗಿಯೂ ಸುದ್ದಿಗಳು ಹಬ್ಬಿದ್ದವು. ಪ್ರಸ್ತುತ ಈ ಎಲ್ಲ ಸುದ್ದಿಗಳು ನಿಜವಲ್ಲ ಎಂಬುದನ್ನು ವೀಡಿಯೋ ಮುಖಾಂತರ ಝೆಲೆನ್ಸ್ಕಿ ಸ್ಪಷ್ಟಪಡಿಸಿದ್ದಾರೆ.