ಪಾಕಿಸ್ತಾನ, ಮಾ 05 (DaijiworldNews/DB): ಪೇಶಾವರದ ಮಸೀದಿಯೊಂದರಲ್ಲಿ ಶುಕ್ರವಾರ ಪ್ರಾರ್ಥನೆಯ ವೇಳೆ ನಡೆದಿದ್ದ ಬಾಂಬ್ ಸ್ಪೋಟ ಪ್ರಕರಣದ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ಸ್ ಹೊತ್ತುಕೊಂಡಿದೆ.
ಪೇಶಾವರದ ಮಸೀದಿಯೊಂದರಲ್ಲಿ ಶುಕ್ರವಾರ ಪ್ರಾರ್ಥನಾ ಸಮಯದಲ್ಲಿ ನಡೆದಿದ್ದ ದಾಳಿ ಪ್ರಕರಣದಲ್ಲಿ ಮೃತಪಟ್ಟವರ ಸಂಖ್ಯೆ 57ಕ್ಕೇರಿದೆ. 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇಬ್ಬರು ಭಯೋತ್ಪಾದಕರು ಪೇಶಾವರದ ಮಸೀದಿ ಬಳಿ ಪೊಲೀಸ್ ಅಧಿಕಾರಿಗಳ ಮೇಲೆ ಗುಂಡು ಹಾರಿಸಿದ್ದರು. ಬಳಿಕ ಅವರಲ್ಲೋರ್ವ ಕಟ್ಟಡಕ್ಕೆ ಪ್ರವೇಶಿಸಿ ಸ್ಫೋಟ ನಡೆಸಿದ್ದ. ಇದೀಗ ಸ್ಪೋಟದ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆಯು ಹೊತ್ತುಕೊಂಡಿದೆ.
ವಿಶ್ವಸಂಸ್ಥೆ ಸೆಕ್ರೆಟರಿ-ಜನರಲ್ ಆಂಟೋನಿಯೊ ಗುಟೆರಸ್ ಸ್ಫೋಟವನ್ನು ಖಂಡಿಸಿದ್ದು, ‘ಪ್ರಾರ್ಥನಾ ಸ್ಥಳಗಳು ಸ್ವರ್ಗವಾಗಬೇಕೇ ಹೊರತು, ಅಲ್ಲಿ ದಾಳಿ ನಡೆಸಿ ಮನುಷ್ಯರನ್ನು ಹತ್ಯೆಗೈಯಬಾರದು’ ಎಂದು ಟ್ವೀಟ್ ಮುಖಾಂತರ ಘಟನೆಯನ್ನು ಖಂಡಿಸಿದ್ದಾರೆ.
‘ಶಿಯಾ ಆರಾಧಕರನ್ನು ಗುರಿಯಾಗಿಸುವ ಉದ್ದೇಶದಿಂದ ಈ ದಾಳಿ ನಡೆದಿದ್ದು, ಇಂತಹ ಘಟನೆಗಳು ಖಂಡನೀಯ’ ಎಂದು ಪಾಕಿಸ್ತಾನದ ಮಾನವ ಹಕ್ಕುಗಳ ಆಯೋಗವು ಹೇಳಿಕೆಯಲ್ಲಿ ತಿಳಿಸಿದೆ. ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಕೂಡಾ ಘಟನೆಯನ್ನು ಖಂಡಿಸಿದ್ದು, ಬಾಂಬ್ ದಾಳಿಯಲ್ಲಿ ಗಾಯಗೊಂಡವರಿಗೆ ತುರ್ತು ವೈದ್ಯಕೀಯ ಸೇವೆ ನೀಡಲು ಆದೇಶಿಸಿದ್ದರು.