ಮಾಸ್ಕೊ, ಮಾ 05 (DaijiworldNews/DB): ನಾಗರಿಕರನ್ನು ಸ್ಥಳಾಂತರಿಸಲು ಸಹಾಯವಾಗಲೆಂದು ಶನಿವಾರದಿಂದ ಉಕ್ರೇನ್ನ ಎರಡು ಪ್ರದೇಶಗಳಲ್ಲಿ ರಷ್ಯಾದ ಮಿಲಿಟರಿ ಪಡೆ ತಾತ್ಕಾಲಿಕವಾಗಿ ಕದನ ವಿರಾಮ ಘೋಷಿಸಿದೆ ಎಂದು ರಷ್ಯಾದ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಉಕ್ರೇನ್ ನ ಮರಿಯುಪೋಲ್ ಮತ್ತು ವೊಲ್ನೋವಾಖಾ ಪ್ರದೇಶದಲ್ಲಿ ಭಾರತೀಯ ಕಾಲಮಾನ ಬೆಳಗ್ಗೆ 11.30ರ ಹೊತ್ತಿಗೆ ಕದನ ವಿರಾಮ ಘೋಷಣೆ ಮಾಡಲಾಗಿದ್ದು, ಇದು ಮಾನವೀಯ ದೃಷ್ಟಿಯಿಂದ ಮಾಡಿರುವ ನಿರ್ಧಾರವಾಗಿದೆ. ನಾಗರಿಕರಿಗೆ ಮಾನವೀಯ ಕಾರಿಡಾರ್ ಗಳನ್ನು ಮುಕ್ತಗೊಳಿಸಲಾಗುವುದು ಎಂದು ತಿಳಿಸಿದೆ.
ರಷ್ಯಾ-ಉಕ್ರೇನ ನಡುವಿನ ಯುದ್ದ ಇಂದು ಹತ್ತನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ರಷ್ಯಾ, ಉಕ್ರೇನ್ನಿಗರು ಮಾತ್ರವಲ್ಲದೆ ಹಲವಾರು ವಿದೇಶಿಗರು ಸಂಕಷ್ಟ ಅನುಭವಿಸಿದ್ದರು. ಹಲವರು ಜೀವ ಕಳೆದುಕೊಂಡಿದ್ದರು.
ಯುದ್ಧ ನಿಲ್ಲಿಸುವಂತೆ ಅನೇಕ ರಾಷ್ಟ್ರಗಳು ಒತ್ತಾಯಿಸುತ್ತಲೇ ಬಂದಿದ್ದವು. ಆದರೆ ರಷ್ಯಾ ಇದ್ಯಾವುದಕ್ಕೂ ಮಣೆ ಹಾಕದೆ ಯುದ್ಧ ಮುಂದುವರಿಸಿತ್ತು. ಪ್ರಸ್ತುತ ಕದನ ವಿರಾಮ ಘೋಷಣೆ ಮಾಡಿರುವುದು ಮಹತ್ವ ಪಡೆದಿದೆ. ಯುದ್ದ ನಿಲ್ಲಿಸುವ ಸಂಬಂಧ ಎರಡು ಸುತ್ತಿನ ಮಾತುಕತೆಗಳು ಈಗಾಗಲೇ ರಷ್ಯಾ ಮತ್ತು ಉಕ್ರೇನ್ ನಡುವೆ ನಡೆದಿದ್ದರೂ ಯಾವುದೇ ನಿರ್ಧಾರಕ್ಕೆ ಬಂದಿರಲಿಲ್ಲ.