ಮಾಸ್ಕೊ, ಮಾ 05 (DaijiworldNews/DB): ಉಕ್ರೇನ್-ರಷ್ಯಾ ನಡುವಿನ ಯುದ್ಧ ವಿರೋಧಿಸಿ ರಷ್ಯಾದ ಸುದ್ದಿ ವಾಹಿನಿಯೊಂದರ ಸಿಬಂದಿ ನೇರಪ್ರಸಾರದ ವೇಳೆ ಸಾಮೂಹಿಕ ರಾಜೀನಾಮೆ ಸಲ್ಲಿಸಿದ್ದಾರೆ.
ರಷ್ಯಾದ ಟಿವಿ ರೇನ್ ಸುದ್ದಿವಾಹಿನಿಯ ಸಿಬಂದಿ ನೇರಪ್ರಸಾರದ ವೇಳೆ ರಾಜೀನಾಮೆ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ನಿರ್ಧಾರದಿಂದಾಗಿ ರಷ್ಯಾದ ಅಧಿಕಾರಿಗಳು ಸುದ್ದಿಪ್ರಸಾರವನ್ನು ಸ್ಥಗಿತಗೊಳಿಸಿದ್ದಾರೆ. ಬಳಿಕ ಪ್ರಕಟನೆ ಹೊರಡಿಸಿರುವ ಅಧಿಕಾರಿಗಳು ಅನಿರ್ಧಿಷ್ಟಾವಧಿಗೆ ಮಾತ್ರ ಸುದ್ದಿಪ್ರಸಾರ ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಕೊನೆಯ ಬುಲೆಟಿನ್ ಪ್ರಸಾರ ಮಾಡಿ ಹೊರ ನಡೆದ ಬಳಿಕ ವಾಹಿನಿ ಸಂಸ್ಥಾಪಕರ ಪೈಕಿ ಓರ್ವರಾದ ನಟಾಲಿಯಾ ಸಿಂಡೆಯೇವಾ, ’ನಮಗೆ ಯುದ್ಧ ಬೇಡ, ಅದಕ್ಕಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ’ ಎಂದು ತಿಳಿಸಿದ್ದಾರೆ.
ಲೇಖಕ ಡೇನಿಯಲ್ ಅಬ್ರಹ್ಮಾಂ ಸಾಮಾಜಿಕ ತಾಣದಲ್ಲಿ ಇದನ್ನು ಶೇರ್ ಮಾಡಿಕೊಂಡಿದ್ದಾರೆ.