ಕೀವ್, ಮಾ 08 (DaijiworldNews/HR): ಯುದ್ದಗ್ರಸ್ಥ ಉಕ್ರೇನ್ನಲ್ಲಿ ಹಾರ್ಕಿವ್ ನಗರದ ಸಮೀಪ ರಷ್ಯಾದ ಹಿರಿಯ ಸೇನಾಧಿಕಾರಿಯನ್ನು ಹತ್ಯೆಮಾಡಿರುವುದಾಗಿ ಉಕ್ರೇನ್ ಮಂಗಳವಾರ ತಿಳಿಸಿದೆ.
ಈ ಕುರಿತು ಉಕ್ರೇನ್ ರಕ್ಷಣಾ ಸಚಿವಾಲಯದ ಗುಪ್ತಚರ ಮುಖ್ಯ ನಿರ್ದೇಶನಾಲಯ ಮಾಹಿತಿ ನೀಡಿದ್ದು, ರಷ್ಯಾದ ಸೇನೆಯ 41 ನೇ ಪಡೆಯ ಮೊದಲ ಉಪ ಕಮಾಂಡರ್ ಮೇಜರ್ ಜನರಲ್ ವಿಟಾಲಿ ಗೆರಾಸಿಮೊವ್ ಸೋಮವಾರ ಹತ್ಯೆಗೀಡಾಗಿದ್ದಾರೆ ಎಂದು ತಿಳಿಸಿದೆ.
ಇನ್ನು ಸೇನೆಯ 41ನೇ ಪಡೆಯ ಉಪ ಕಮಾಂಡರ್ ಆಗಿದ್ದ ಆಂಡ್ರೆ ಸುಖೋವೆಟ್ಸ್ಕಿ ಅವರನ್ನು ಕೂಡ ಉಕ್ರೇನ್ ಪಡೆಗಳು ಫೆಬ್ರುವರಿ ತಿಂಗಳ ಕೊನೆಯಲ್ಲಿ ಹತ್ಯೆ ಮಾಡಿದ್ದವು ಎಂದು ಉಕ್ರೇನ್ ಹೇಳಿಕೊಂಡಿತ್ತು.
ಈ ವರೆಗೆ ರಷ್ಯಾದ 11 ಸಾವಿರಕ್ಕೂ ಹೆಚ್ಚು ಯೋಧರನ್ನು ಹತ್ಯೆ ಮಾಡಿರುವುದಾಗಿ ಉಕ್ರೇನ್ ಹೇಳಿದೆ. ಆದರೆ ರಷ್ಯಾ ಕೇವಲ 500 ಯೋಧರು ಮೃತಪಟ್ಟಿದ್ದಾರೆ ಎಂದು ಹೇಳಿದೆ.