ವಿಶ್ವಸಂಸ್ಥೆ, ಮಾ 08 (DaijiworldNews/MS): ಸುಮಿಯಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳು ಸೇರಿದಂತೆ ನಾಗರೀಕರ ರಕ್ಷಣೆಗಾಗಿ ಭಾರತವು ನಿರಂತರವಾಗಿ ಮನವಿ ಮಾಡುತ್ತಿದ್ದರೂ ಉಕ್ರೇನ್ ಮತ್ತು ರಷ್ಯಾ ಮಾನವೀಯ ಕಾರಿಡಾರ್ ತೆರೆದಿಲ್ಲ ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ರಾಯಭಾರಿ ಟಿ.ಎಸ್.ತಿರುಮೂರ್ತಿ ಹೇಳಿದ್ದಾರೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ಸೋಮವಾರದ ಉಕ್ರೇನ್–ರಷ್ಯಾ ಸಂಘರ್ಷಕ್ಕೆ ಸಂಬಂಧಿಸಿದಂತೆ ಅವರು ಮಾತನಾಡಿ " ಭಾರತೀಯರು ಸೇರಿದಂತೆ ಎಲ್ಲಾ ನಾಗರಿಕರಿಗೆ ಸುರಕ್ಷಿತ ತೆರವಿನ ಮಾರ್ಗಕ್ಕಾಗಿ ನಮ್ಮ ತುರ್ತು ಬೇಡಿಕೆಯನ್ನು ನಾವು ಪುನರುಚ್ಚರಿಸಿದ್ದೇವೆ. ನಾವು ಎರಡೂ ಕಡೆಯವರಿಗೆ ಮಾತುಕತೆಯ ಮೂಲಕ ಪದೇ ಪದೇ ಒತ್ತಾಯಿಸಿದರೂ, ಸುಮಿಯಲ್ಲಿ ನಮ್ಮ ವಿದ್ಯಾರ್ಥಿಗಳಿಗೆ ಸುರಕ್ಷಿತ ಕಾರಿಡಾರ್ ಕಾರ್ಯರೂಪಕ್ಕೆ ಬಂದಿಲ್ಲ ಎಂಬುದರ ಬಗ್ಗೆ ತುಂಬಾ ಕಳವಳಗೊಂಡಿದ್ದೇವೆ" ಎಂದು ತಿರುಮೂರ್ತಿ ಹೇಳಿದ್ದಾರೆ.
ನಿನ್ನೆ ನಡೆದ ಪ್ರಧಾನಿ ಮೋದಿ ಹಾಗೂ ರಷ್ಯಾ ಅಧ್ಯಕ್ಷ ಪುಟಿನ್ ಅವರ ದೂರವಾಣಿ ಮಾತುಕತೆಯ ಸಂದರ್ಭ , ಯುದ್ಧ-ಹಾನಿಗೊಳಗಾದ ಉಕ್ರೇನ್ನ ಸುಮಿಯಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳಿಗೆ ಸುರಕ್ಷಿತ ಸ್ಥಳಾಂತರಿಸುವ ವಿಷಯವನ್ನು ಪ್ರಧಾನಿ ಮೋದಿ ಪ್ರಸ್ತಾಪಿಸಿದ್ದಾರೆ . ಸರ್ಕಾರದ ಮೂಲಗಳ ಪ್ರಕಾರ, ವ್ಲಾಡಿಮಿರ್ ಪುಟಿನ್ ಅವರು ಸುಮಿಯಿಂದ ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಸಾಧ್ಯವಿರುವ ಎಲ್ಲ ಸಹಕಾರವನ್ನು ಪ್ರಧಾನಿ ಮೋದಿಗೆ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಸುಮಾರು 700 ಭಾರತೀಯರು, ಹೆಚ್ಚಾಗಿ ಸುಮಿ ಸ್ಟೇಟ್ ಯೂನಿವರ್ಸಿಟಿಯ ವೈದ್ಯಕೀಯ ಕಾಲೇಜುಗಳ ವಿದ್ಯಾರ್ಥಿಗಳು, ಪ್ರಸ್ತುತ ಉಕ್ರೇನ್ನ ಈಶಾನ್ಯದಲ್ಲಿರುವ ನಗರದಲ್ಲಿ ಸಿಲುಕಿಕೊಂಡಿದ್ದಾರೆ.
ಸರ್ಕಾರದ ಮೂಲಗಳ ಪ್ರಕಾರ, ವ್ಲಾಡಿಮಿರ್ ಪುಟಿನ್ ಅವರು ಸುಮಿಯಿಂದ ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಸಾಧ್ಯವಿರುವ ಎಲ್ಲ ಸಹಕಾರವನ್ನು ಪ್ರಧಾನಿ ಮೋದಿಗೆ ಭರವಸೆ ನೀಡಿದ್ದಾರೆ.