ಪಂಜಾಬ್ , ಮಾ 08 (DaijiworldNews/MS): ಏಳು ದಿನದ ಹೆಣ್ಣು ಶಿಶುವನ್ನು ನಿಷ್ಕರುಣೆಯಿಂದ ತಂದೆಯೇ ಗುಂಡಿಕ್ಕಿ ಕೊಂದ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿದೆ.
ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ತವರೂರು ಮಿಯಾನ್ವಾಲಿಯಲ್ಲಿ ಭಾನುವಾರ ಈ ಘಟನೆ ನಡೆದಿದೆ. ಗಂಡು ಮಗುವನ್ನು ಬಯಸಿದ್ದ ಪಾಪಿ ತಂದೆ ಹಸುಗೂಸನ್ನು ನಿರ್ದಯವಾಗಿ ಹತ್ಯೆ ಮಾಡಿದ್ದಾನೆ.
ಹಿರಿಯ ಪೊಲೀಸ್ ಅಧಿಕಾರಿ ಇಸ್ಮಾಯಿಲ್ ಖಾರಕ್ ಪ್ರಕಾರ, ಆರೋಪಿ ಶಹಜೈಬ್ ಖಾನ್ ಎಂಬಾತ ಮಶಾಲ್ ಫಾತಿಮಾಳನ್ನು ಎರಡು ವರ್ಷದ ಹಿಂದೆ ಮದುವೆಯಾಗಿದ್ದ ಮತ್ತು ಒಂದು ವಾರದ ಹಿಂದೆ ಆತನ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಅಜ್ಜಿಯರಿಂದ ಜನ್ನತ್ ಎಂದು ಹೆಸರಿಸಲಾದ ಹೆಣ್ಣು ಶಿಶುವಿನ ಜನನದ ಸುದ್ದಿಯನ್ನು ಕೇಳಿದ ಖಾನ್, ತನ್ನ ಹೆಂಡತಿ ಮತ್ತು ಮಗಳನ್ನು ಶಪಿಸಲು ಪ್ರಾರಂಭಿಸಿ ಕೃತ್ಯ ಎಸಗಿದ್ದಾನೆ.
ಹೆಣ್ಣು ಮಗು ಹುಟ್ಟಿದ ಆಕ್ರೋಶದಲ್ಲಿ ಮನೆ ಬಿಟ್ಟು ಹೋಗಿದ್ದ ಶಹಜೈಬ್ ಖಾನ್ ಭಾನುವಾರ ಮನೆಗೆ ಮರಳಿ ಪಿಸ್ತೂಲ್ ತೆಗೆದುಕೊಂಡು ಗುಂಡು ಹಾರಿಸಿ ಶಿಶುವನ್ನು ಹತ್ಯೆಗೈದಿದ್ದಾನೆ. ಸದ್ಯ ಶಹಜೈಬ್ ಖಾನ್ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ.
ನನ್ನ ಪತಿ ಗಂಡು ಮಗುವನ್ನು ಹೊಂದಲೇ ಬೇಕು ಎಂಬ ಗೀಳು ಹೊಂದಿದ್ದು, ಆದರೆ ತನ್ನ ಸ್ವಂತ ಮಗಳನ್ನು ಕೊಲ್ಲುವ ಇಂತಹ ಘೋರ ಅಪರಾಧವನ್ನು ಮಾಡುತ್ತಾನೆ ಎಂದು ಕುಟುಂಬದ ಯಾರಿಗೂ ತಿಳಿದಿರಲಿಲ್ಲ" ಎಂದು ಆತನ ಪತ್ನಿ ಮಶಾಲ್ ಫಾತಿಮಾ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ್ದಾಳೆ.