ಕೀವ್, ಮಾ 08 (DaijiworldNews/HR): ಉಕ್ರೇನ್ನಲ್ಲಿರುವ ವಿದ್ಯಾರ್ಥಿಗಳ ಸುರಕ್ಷಿತ ಸ್ಥಳಾಂತರ ಕುರಿತ ಜಾಗತಿಕ ಆತಂಕ ಹೆಚ್ಚಾಗಿರುವಂತೆಯೇ ರಷ್ಯಾ ಸರ್ಕಾರ ಸುಮಿ ಸೇರಿದಂತೆ ಉಕ್ರೇನ್ನ 4 ಜಿಲ್ಲೆಗಳಲ್ಲಿ ಕದನ ವಿರಾಮ ಘೋಷಣೆ ಮಾಡಿದೆ ಎಂದು ತಿಳಿದು ಬಂದಿದೆ.
ಈ ಕುರಿತು ರಷ್ಯಾದ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದ್ದು, ನಾಗರಿಕರ ಸ್ಥಳಾಂತರಿಸುವಿಕೆಗಾಗಿ ಉಕ್ರೇನ್ ರಾಜಧಾನಿ ಕೀವ್, ಚೆರ್ನಿಹಿವ್, ಸುಮಿ, ಖಾರ್ಕಿವ್ ಮತ್ತು ಮರಿಯುಪೋಲ್ ನಗರಗಳಲ್ಲಿ ಕದನ ವಿರಾಮವನ್ನು ಘೋಷಿಸಿದೆ ಎಂದು ತಿಳಿಸಿದೆ.
ಇನ್ನು ಬೆಲಾರಸ್ನಲ್ಲಿ ನಿನ್ನೆ ರಷ್ಯಾ ಮತ್ತು ಉಕ್ರೇನ್ ನಡುವಿನ ಮೂರನೇ ಸುತ್ತಿನ ಮಾತುಕತೆ ವಿಫಲವಾದ ನಂತರ ಈ ಬೆಳವಣಿಗೆ ನಡೆದಿದೆ.
ಸೋಮವಾರ ನಡೆದ ಸಭೆಯಲ್ಲಿ ಎರಡೂ ದೇಶಗಳ ನಾಗರಿಕರ ಸ್ಥಳಾಂತರಿಸುವಿಕೆಯ ಸಮಸ್ಯೆಗಳನ್ನು ಪ್ರಸ್ತಾಪಿಸಿದ್ದು, ಉಕ್ರೇನಿಯನ್ ಸೇನೆಯು ಮಂಗಳವಾರದಿಂದ ಮಾನವೀಯ ಕಾರಿಡಾರ್ ಕೆಲಸ ಮಾಡಲು ಪ್ರಾರಂಭಿಸುತ್ತಾರೆ ಎಂದು ರಷ್ಯಾಕ್ಕೆ ಭರವಸೆ ನೀಡಿತ್ತು ಎಂದು ವರದಿಯಾಗಿದೆ.