ಉಕ್ರೇನ್, ಮಾ 10 (DaijiworldNews/DB): ರಷ್ಯಾ ಸೇನೆಯು ಉಕ್ರೇನ್ ನ ಮರಿಯುಪೋಲ್ ನಲ್ಲಿರುವ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆ ಮೇಲೆ ವೈಮಾನಿಕ ದಾಳಿ ನಡೆಸಿದ್ದು, ದಾಳಿಯಲ್ಲಿ 17ಕ್ಕೂ ಹೆಚ್ಚು ಮಂದಿ ಗಂಭೀರವಾಗಿವಾಗಿ ಗಾಯಗೊಂಡಿದ್ದು, ಕದನ ವಿರಾಮ ಘೋಷಿಸಲಾಗಿದ್ದರೂ, ಅದನ್ನು ಉಲ್ಲಂಘಿಸಿ ರಷ್ಯಾ ಸೇನೆ ಬಾಂಬ್ ಸ್ಪೋಟ ನಡೆಸಿದೆ.
ದಾಳಿಯನ್ನು ಉಕ್ರೇನ್ ಅಧ್ಯಕ್ಷ ವೊಲೆಡಿಮಿರ್ ಝೆಲೆನ್ಸ್ಕಿ ಖಂಡಿಸಿದ್ದು, ದಾಳಿ ನಡೆಸಿರುವ ವೀಡಿಯೋವನ್ನು ಟ್ವಿಟರ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಆಸ್ಪತ್ರೆ ಸಂಪೂರ್ಣ ಧ್ವಂಸವಾಗಿರುವುದು ವೀಡಿಯೋದಲ್ಲಿ ಕಂಡು ಬರುತ್ತದೆ.
'ರಷ್ಯಾದ ಈ ಭಯೋತ್ಪಾದನೆ ಆಟವನ್ನು ಜಗತ್ತು ಇನ್ನೆಷ್ಟು ದಿನ ನೋಡಿಕೊಂಡು ಸುಮ್ಮನಿರುತ್ತದೆ ಎಂದು ಪ್ರಶ್ನಿಸಿರುವ ಅವರು, ರಷ್ಯಾಕ್ಕೆ ಶಕ್ತಿ ಇರಬಹುದು, ಆದರೆ ಮಾನವೀಯತೆ ಸತ್ತು ಹೋಗಿದೆ' ಎಂದು ಬರೆದುಕೊಂಡಿದ್ದಾರೆ.
ಘಟನೆಯಲ್ಲಿ 17 ಮಂದಿ ಗಾಯಗೊಂಡಿದ್ದು, ಯಾವುದೇ ಸಾವು ನೋವು ಸಂಭವಿಸಿಲ್ಲ. ಅದೃಷ್ಟವಶಾತ್ ಯಾವುದೇ ಮಕ್ಕಳಿಗೆ ಗಾಯವಾಗಿಲ್ಲ ಎಂದವರು ಸ್ಪಷ್ಟಪಡಿಸಿದ್ದಾರೆ.