ಕೀವ್, ಮಾ 11(DaijiworldNews/MS): ಅಂತರಾಷ್ಟ್ರೀಯ ಸಮುದಾಯದ ಮನವಿಯನ್ನು ಲೆಕ್ಕಿಸದೆ ಉಕ್ರೇನ್ ವಿರುದ್ದ ಸಮರವನ್ನು ರಷ್ಯಾ ಮುಂದುವರಿಸಿದೆ. ಇನ್ನೊಂದೆಡೆ ರಷ್ಯಾ - ಉಕ್ರೇನ್ ನಡುವೆ ಗುರುವಾರ ಟರ್ಕಿಯಲ್ಲಿ ನಡೆದ ಸಂಧಾನ ಮಾತುಕತೆ ವಿಫಲವಾಗಿದೆ. ರಷ್ಯಾ ದಾಳಿ ವಿರುದ್ದ ಗುಡುಗಿರುವ ಉಕ್ರೇನ್ ತಾವು ಶರಣಾಗಿಲ್ಲ, ಹೋರಾಟ ಮುಂದುವರಿಸುವುದಾಗಿ ಘೋಷಿಸಿದೆ.
ಈ ನಡುವೆ ಉಕ್ರೇನ್ನಲ್ಲಿ ಯಾವುದೇ ರಾಸಾಯನಿಕ ಅಸ್ತ್ರ ಅಥವಾ ಸಾಮೂಹಿಕ ವಿನಾಶದ ಯಾವುದೇ ಅಸ್ತ್ರಗಳನ್ನು ಅಭಿವೃದ್ಧಿಪಡಿಸಿಲ್ಲ. ಆದರೆ ನಮ್ಮ ದೇಶದ ವಿರುದ್ಧ ಜೈವಿಕ ಅಸ್ತ್ರಗಳ ಬಳಕೆಯು ಮುಂದೆ "ಅತ್ಯಂತ ಕಠಿಣ ನಿರ್ಬಂಧಗಳಿಗೆ " ಆಹ್ವಾನ ನೀಡಿದಂತಾಗುತ್ತದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ರಷ್ಯಾಕ್ಕೆ ಎಚ್ಚರಿಕೆ ನೀಡಿದ್ದಾರೆ.
ಜೈವಿಕ ಶಸ್ತ್ರಾಸ್ತ್ರಗಳ ಅಭಿವೃದ್ಧಿಗೆ ಉಕ್ರೇನ್ ಸಂಶೋಧನೆ ನಡೆಸುತ್ತಿದೆ ಎಂದು ರಷ್ಯಾ ಆರೋಪಕ್ಕೆ ಝೆಲೆನ್ಸ್ಕಿ ಪ್ರತಿಕ್ರಿಯಿಸಿ ಮಾತನಾಡಿದ್ದು, ನಮ್ಮದು ಸಮರ್ಪಕ ರಾಷ್ಟ್ರವಾಗಿದ್ದು ಅದರ ಅಧ್ಯಕ್ಷ ನಾನಾಗಿದ್ದೇನೆ ಮತ್ತು ಇಬ್ಬರು ಮಕ್ಕಳ ತಂದೆಯಾಗಿದ್ದೇನೆ. ನನ್ನ ಭೂಮಿಯಲ್ಲಿ ಯಾವುದೇ ರಾಸಾಯನಿಕ ಅಥವಾ ಸಾಮೂಹಿಕ ವಿನಾಶದ ಯಾವುದೇ ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸಿಲ್ಲ ಎಂದು ಎಂದು ಶುಕ್ರವಾರ ಬೆಳಿಗ್ಗೆ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಝೆಲೆನ್ಸ್ಕಿ ಹೇಳಿದ್ದಾರೆ.
ಉಕ್ರೇನ್ , ಮಾರಣಾಂತಿಕ ರೋಗಕಾರಕಗಳ ರಹಸ್ಯವಾಗಿ ಹರಡಲು ಕಾರ್ಯವಿಧಾನದ ಬಗ್ಗೆ ಸಂಶೋಧನೆ ನಡೆಸುತ್ತಿದ್ದು ಇದಕ್ಕೆ ಅಮೇರಿಕಾದಿಂದ ಧನಸಹಾಯ ಪಡೆದಿದೆ" ಎಂದು ರಷ್ಯಾದ ರಕ್ಷಣಾ ಸಚಿವಾಲಯದ ವಕ್ತಾರ ಇಗೊರ್ ಕೊನಾಶೆಂಕೋವ್ ಆರೋಪಿಸಿದ್ದು ಇದಕ್ಕೆ ಝೆಲೆನ್ಸ್ಕಿ ಸ್ಪಷ್ಟನೆ ನೀಡಿದ್ದಾರೆ.
ಅಮೇರಿಕಾದ ಸಹಾಯದಿಂದ ಉಕ್ರೇನ್ನಲ್ಲಿ ಸ್ಥಾಪಿಸಲಾದ ಜೈವಿಕ-ಪ್ರಯೋಗಾಲಯಗಳು ಪಕ್ಷಿ, ಬಾವಲಿ ಮತ್ತು ಸರೀಸೃಪ ರೋಗಕಾರಕಗಳ ಮೇಲೆ ಸಂಶೋಧನೆ ನಡೆಸುತ್ತಿದ್ದು ಕರೋನವೈರಸ್ ಮಾದರಿಗಳೊಂದಿಗೆ ಪ್ರಯೋಗಿಸುತ್ತಿವೆ ಎಂದು ಹೇಳಿದ್ದರು.