ಕೀವ್ , ಮಾ 12 (DaijiworldNews/MS): ರಷ್ಯಾ ಉಕ್ರೇನ್ ನಡುವಿನ ಯುದ್ಧದ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಹೋರಾಟವು ಕಡಿಮೆಯಾಗುವ ಯಾವುದೇ ಲಕ್ಷಣಗಳನ್ನು ಕಂಡುಬರದ ಹಿನ್ನಲೆಯಲ್ಲಿ ವಿಶ್ವದ ಅತ್ಯುತ್ತಮ ಸ್ನೈಪರ್ಗಳಲ್ಲಿ ಒಬ್ಬರಾದ 'ವಾಲಿ' ರಷ್ಯಾದ ಪಡೆಗಳ ವಿರುದ್ಧ ಹೋರಾಡಲು ಯುದ್ಧಪೀಡಿತ ಉಕ್ರೇನ್ ಆಗಮಿಸಿ ಸೇನೆ ಸೇರಿರುವ ವರದಿಯಾಗಿದೆ.
ರಾಯಲ್ ಕೆನಡಿಯನ್ 22ನೇ ರೆಜಿಮೆಂಟ್ನ ಅನುಭವಿ ಸ್ನೈಪರ್ ಆಗಿರುವ ವಾಲಿ ಉಕ್ರೇನಿಯನ್ ಅಧ್ಯಕ್ಷ ಝೆಲೆನ್ಸ್ಕಿ ಅವರು ವಿದೇಶಿಯರು ತಮ್ಮ ಪರ ಹೋರಾಟದಲ್ಲಿ ಭಾಗವಹಿಸುವಂತೆ ಕರೆ ನೀಡಿದಾಗ 'ಎಚ್ಚರಿಕೆಯ ಕರೆಗಂಟೆಯನ್ನು ಕೇಳಿ ಧಾವಿಸಿ ಬರುವ ಅಗ್ನಿಶಾಮಕ ದಳ'ದವರಂತೆ ಧಾವಿಸಿ ಬಂದಿದ್ದಾರೆ ಎಂದು ತಿಳಿದುಬಂದಿದೆ.
ವಾಲಿ ಬುಧವಾರ ಉಕ್ರೇನ್ಗೆ ಆಗಮಿಸಿದ ನಂತರ ಎರಡು ದಿನಗಳಲ್ಲಿ ಆರು ರಷ್ಯಾದ ಸೈನಿಕರನ್ನು ಕೊಂದಿದ್ದಾರೆ ಎಂದು ವರದಿಯಾಗಿದೆ.
ದಿನಕ್ಕೆ 40ಕ್ಕೂ ಹೆಚ್ಚು ಹತ್ಯೆ:
ಗುಪ್ತಸ್ಥಳದಿಂದ ಇಟ್ಟ ಗುರಿ ತಪ್ಪದಂತೆ ಗುಂಡು ಚಲಾಯಿಸುವ ವಿಶ್ವದ ಅತ್ಯುತ್ತಮ ಗುರಿಕಾರ (ಸ್ನೈಪರ್) ರಲ್ಲಿ ವಾಲಿ ಕೂಡಾ ಒಬ್ಬರಾಗಿದ್ದಾರೆ. ಉತ್ತಮ ಸ್ನೈಪರ್, ಸರಾಸರಿಯಾಗಿ, ದಿನಕ್ಕೆ 5-6 ಹತ್ಯೆ ನಡೆಸಿದರೆ, ಅವರು ದಿನದಲ್ಲಿ 40 ಕೊಲೆ ಮಾಡಬಲ್ಲವರಾಗಿದ್ದಾರೆ.
40 ವರ್ಷ ವಯಸ್ಸಿನ ಫ್ರೆಂಚ್-ಕೆನಡಾದ ಕಂಪ್ಯೂಟರ್ ವಿಜ್ಞಾನಿಯಾಗಿರುವ ವಾಲಿ, 2009 ಮತ್ತು 2011 ರ ನಡುವೆ ಅಫ್ಘಾನಿಸ್ತಾನ ಯುದ್ಧದಲ್ಲಿ ಎರಡು ಬಾರಿ ಸೇವೆ ಸಲ್ಲಿಸಿದ್ದಾರೆ. ವಾಲಿ ಅವರು ಅಫ್ಘಾನಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಮಯದಲ್ಲಿ ಅರೇಬಿಕ್ ಭಾಷೆಯಲ್ಲಿ ರಕ್ಷಕ ಎಂಬ ಅರ್ಥ ಬರುವ ವಾಲಿ ಎಂಬ ಹೆಸರನ್ನು ಪಡೆದರು.
ಇತ್ತೀಚಿನ ಸಂದರ್ಶನವೊಂದರಲ್ಲಿ, ಪ್ರಸಿದ್ಧ ಸ್ನೈಪರ್ ವಾಲಿ, “ನಾನು ಉಕ್ರೇನ್ ಜನರಿಗೆ ಸಹಾಯ ಮಾಡಲು ಬಯಸುತ್ತೇನೆ. ಯಾಕೆಂದರೆ ಇದರ ಉತ್ತರ ಸರಳವಾಗಿದೆ. ನಾನು ಸಹಾಯ ಮಾಡಬೇಕಾಗಿದೆ ಏಕೆಂದರೆ ಇಲ್ಲಿನ ಜನರು ಯುರೋಪಿಯನ್ ಆಗಲು ಬಯಸುತ್ತಾರೆ ಹೊರತು ರಷ್ಯನ್ ಅಲ್ಲ" ಎಂದು ಹೇಳಿದ್ದಾರೆ.