ಕೀವ್, ಮಾ 11 (DaijiworldNews/DB): ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ಯುದ್ಧದಲ್ಲಿ ನಿಮ್ಮ ಮಕ್ಕಳು ಭಾಗವಹಿಸದಂತೆ ತಡೆಯಿರಿ ಎಂಬುದಾಗಿ ರಷ್ಯಾ ತಾಯಂದಿರಿಗೆ ಉಕ್ರೇನ್ ಅಧ್ಯಕ್ಷ ವೊಲೆಡಿಮಿರ್ ಝೆಲೆನ್ಸ್ಕಿ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ.
ಟೆಲಿಗ್ರಾಂನಲ್ಲಿ ವೀಡಿಯೋ ಸಂದೇಶವೊಂದನ್ನು ಬಿಡುಗಡೆ ಮಾಡಿರುವ ಅವರು, ಬಲವಂತಕ್ಕೆ ಒಳಗಾಗಿ ರಷ್ಯಾ ತಾಯಂದಿರು ಮಕ್ಕಳನ್ನು ಯುದ್ಧಕ್ಕೆ ಕಳುಹಿಸಿಕೊಡಬೇಡಿ. ಈಗಲೇ ನಿಮ್ಮ ಮಕ್ಕಳು ಎಲ್ಲಿದ್ದಾರೆಂದು ನೋಡಿಕೊಳ್ಳಿ. ಸಣ್ಣ ಅನುಮಾನ ಬಂದರೂ ಅವರನ್ನು ಸಾಯಿಸುವುದು ಅಥವಾ ಸೆರೆ ಹಿಡಿಯುವುದು ನಡೆಯದಂತೆ ನೋಡಿಕೊಳ್ಳಿ ಎಂದವರು ಹೇಳಿದ್ದಾರೆ.
ಉಕ್ರೇನ್ ಇಂತಹ ಯುದ್ದವನ್ನು ಎಂದೂ ಬಯಸಿಲ್ಲ. ಆದರೆ ರಷ್ಯಾ ಅಮಾನವೀಯ ರೀತಿಯಲ್ಲಿ ಯುದ್ಧ ಮಾಡುತ್ತಿದೆ. ಸಾಧ್ಯವಾದಷ್ಟು ಈ ಭಯಾನಕ ಪರಿಸ್ಥಿತಿಯಿಂದ ರಕ್ಷಿಸಿಕೊಳ್ಳಲು ಉಕ್ರೇನ್ ಸಶಕ್ತವಾಗಿದೆ ಎಂದೂ ಹೇಳಿಕೊಂಡಿದ್ದಾರೆ.
ಬಲವಂತವಾಗಿ ರಷ್ಯಾ ಸೇನೆ ರಷ್ಯಾ ಯುವಕರನ್ನು ಯುದ್ದಕ್ಕೆ ಎಳೆಯುತ್ತಿದೆ, ಅವರಲ್ಲಿ ಹಲವರನ್ನು ಉಕ್ರೇನ್ ಸೇನೆ ತನ್ನ ಸುಪರ್ದಿಯಲ್ಲಿ ಇರಿಸಿಕೊಂಡಿದೆ ಎಂಬ ಸುದ್ದಿಗಳು ಹರಿದಾಡಿದ ಬೆನ್ನಲ್ಲೇ ಝೆಲೆನ್ಸ್ಕಿಈ ವೀಡಿಯೋ ಹರಿಯಬಿಟ್ಟಿದ್ದಾರೆ. ಅಲ್ಲದೆ, ಉಕ್ರೇನ್ ಗೆ ತೆರಳಿದ ತಮ್ಮ ಪುತ್ರರ ಬಗ್ಗೆ ಮಾಹಿತಿ ಸಿಗದೆ ಹಲವು ತಾಯಂದಿರು ಸಾಮಾಜಿಕ ತಾಣಗಳಲ್ಲಿ ಆತಂಕ ತೋಡಿಕೊಂಡಿದ್ದರು.