ಕೀವ್, ಮಾ 13 (DaijiworldNews/DB): ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಕಳಪೆ ಪ್ರದರ್ಶನ ತೋರಿದ ರಷ್ಯಾ ಸೇನೆಯ 8 ಮೇಜರ್ ಜನರಲ್ ಗಳನ್ನು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಕೆಲಸದಿಂದ ತೆಗೆದಿದ್ದಾರೆ ಎನ್ನಲಾಗಿದೆ.
ಉಕ್ರೇನ್-ರಷ್ಯಾ ಸಮರ 18 ದಿನ ಪೂರೈಸಿದೆ. ಆದರೂ ಪುಟ್ಟ ರಾಷ್ಟ್ರ ಉಕ್ರೇನ್ ನ ಸಂಪೂರ್ಣವಾಗಿ ಮಣಿಸಲು ಬಲಾಢ್ಯ ರಾಷ್ಟ್ರಕ್ಕೆ ಸಾಧ್ಯವಾಗಿಲ್ಲ. ಯುದ್ಧಕ್ಕಾಗಿ ಪ್ರತಿದಿನ ರಷ್ಯಾ ಸೇನೆ ಮಿಲಿಯನ್ ಡಾಲರ್ ಗಟ್ಟಲೆ ಹಣ ಸುರಿಯುತ್ತಿದ್ದು, ಆರ್ಥಿಕ ಸಂಕಷ್ಟಕ್ಕೂ ಒಳಗಾಗಿದೆ. ಈ ನಡುವೆ ದಿನಗಳೆದಂತೆ ರಷ್ಯಾ ಸೇನೆ ಮುನ್ನಡೆ ಸಾಧಿಸುವಲ್ಲಿ ಆಸಕ್ತಿ ಕಳೆದುಕೊಂಡಿದೆ ಎಂಬುದಾಗಿ ಅಧ್ಯಕ್ಷ ಪುಟಿನ್ ಸೇನೆಯನ್ನು ತರಾಟೆಗೆ ತೆಗೆದುಕೊಂಡಿದ್ದು, 8 ಮಂದಿ ಮೇಜರ್ ಜನರಲ್ ಗಳನ್ನು ಕೆಲಸದಿಂದ ವಜಾಗೊಳಿಸಿದ್ದಾರೆ ಎಂಬುದಾಗಿ ಉಕ್ರೇನ್ ರಕ್ಷಣಾ ಕಾರ್ಯದರ್ಶಿ ಒಲೆಕ್ಸಿ ಡ್ಯಾನಿಲೋವ್ ಮಾಹಿತಿ ನೀಡಿರುವುದರ ಬಗ್ಗೆ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಅಲ್ಲದೆ ಮಾಸ್ಕೋದ ನಷ್ಟದ ಬಗ್ಗೆ ಅವರ ಗುಪ್ತಚರ ಅಧಿಕಾರಿಗಳ ಮೇಲೆ ಪುಟಿನ್ ಕೋಪಗೊಂಡಿದ್ದಾರೆ ಎನ್ನಲಾಗಿದೆ.
ಉಕ್ರೇನ್ ಜನ ಒಗ್ಗಟ್ಟಾಗಿದ್ದಾರೆ. ಅದರ ಪ್ರತಿಫಲ ರಷ್ಯಾಕ್ಕೆ ಪ್ರಸ್ತುತ ಅರ್ಥವಾಗಿದೆ. ನಾವು ಅವರನ್ನು ಎಲ್ಲಾ ದಿಕ್ಕುಗಳಲ್ಲಿಯೂ ಸೋಲಿಸುತ್ತಿದ್ದೇವೆ. ಅವರು ಯುದ್ಧತಂತ್ರಗಳನ್ನು ಬದಲಿಸುತ್ತಿದ್ದಾರೆ. ಆದರೆ ಅವರಿಗೆ ಹಿನ್ನಡೆಯಾಗುತ್ತಿರುವುದು ಪುಟಿನ್ ಗೆ ಸಹಿಸಲಸಾಧ್ಯವಾಗಿದೆ ಎಂದು ಅವರು ತಿಳಿಸಿರುವುದಾಗಿ ವರದಿ ಹೇಳಿದೆ.