ಇಸ್ಲಾಮಾಬಾದ್, ಮಾ 18 (DaijiworldNews/DB): ಪಾಕಿಸ್ತಾನ ಸಿಂಧ್ ಪರೀಕ್ಷಾ ಕೇಂದ್ರದಿಂದ ಉಡಾಯಿಸಿದ ಕ್ಷಿಪಣಿ ತನ್ನ ಗುರಿ ತಲುಪದೇ ಸಮೀಪದಲ್ಲೇ ವಿಫಲವಾಗಿರುವ ಘಟನೆ ವರದಿಯಾಗಿದೆ. ಆದರೆ ಇದನ್ನು ಪಾಕ್ ಅಲ್ಲಗಳೆದಿದ್ದು, ಇಂತಹ ಯಾವುದೇ ಘಟನೆ ನಡೆದಿಲ್ಲ ಎಂದು ತಿಳಿಸಿದೆ.
ಭಾರತದ ಮೇಲೆ ಪಾಕಿಸ್ತಾನ ಕ್ಷಿಪಣಿ ದಾಳಿ ನಡೆಸಲು ಸಿದ್ಧತೆ ನಡೆಸಿತ್ತು ಎಂಬ ಸುದ್ದಿಯ ಬೆನ್ನಲ್ಲೇ ಈ ಸುದ್ದಿ ಹೊರ ಬಿದ್ದಿದೆ. ಶುಕ್ರವಾರ ಬೆಳಗ್ಗೆ 11 ಗಂಟೆಗೆ ಸಿಂಧ್ ಪ್ರದೇಶದಲ್ಲಿ ಕ್ಷಿಪಣಿ ಪರೀಕ್ಷಿಸಲು ಯೋಜಿಸಲಾಗಿತ್ತು. ಆದರೆ, ಟ್ರಾನ್ಸ್ ಪೋರ್ಟರ್ ಎರೆಕ್ಟರ್ ಲಾಂಚರ್ ನಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಕ್ಷಿಪಣಿ ಉಡಾವಣೆ ಮುಂದೂಡಲಾಗಿತ್ತು. ಮಧ್ಯಾಹ್ನ ವೇಳೆಗೆ ಕ್ಷಿಪಣಿಯನ್ನು ಪರೀಕ್ಷಾರ್ಥವಾಗಿ ಉಡಾಯಿಸಿದ ಕೆಲವೆ ಕ್ಷಣದಲ್ಲಿ ಕ್ಷಿಪಣಿ ತನ್ನ ಗುರಿ ತಲುಪದೇ ಸಿಂಧ್ ನ ಥಾನಾ ಬುಲಾ ಖಾನ್ ಪ್ರದೇಶದಲ್ಲಿ ಪತನಗೊಂಡಿದೆ ಎಂಬುದಾಗಿ ಮೂಲಗಳು ತಿಳಿಸಿವೆ.
ಕ್ಷಿಪಣಿ ಪತನಗೊಂಡ ಬಗ್ಗೆ ಪಾಕ್ ಸುದ್ದಿ ಮಾಧ್ಯಮಗಳು ವರದಿ ಬಿತ್ತರಿಸಿದರೂ, ಸಂಬಂಧಪಟ್ಟವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಸ್ಥಳೀಯ ಕೆಲವು ಅಧಿಕಾರಿಗಳು ಸಾಮಾಜಿಕ ತಾಣಗಳ ಮೂಲಕ ಈ ಸುದ್ದಿ ಸತ್ಯಕ್ಕೆ ದೂರವಾದುದು ಎಂದು ಸಮಜಾಯಿಷಿ ನೀಡಲು ಯತ್ನಿಸಿದ್ದಾರೆ.