ಇಸ್ಲಾಮಾಬಾದ್, ಮಾ 19 (DaijiworldNews/DB): ಪಾಕಿಸ್ತಾನ ಆಡಳಿತರೂಢ ಪಕ್ಷದ ಸುಮಾರು 24ಕ್ಕೂ ಹೆಚ್ಚುಅತೃಪ್ತರು ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ನಿರ್ಣಯದ ಮೇಲೆ ಮತ ಹಾಕಲು ನಿರ್ಧರಿಸಿದ್ದಾರೆ.
ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ ಮತ್ತು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ ಸುಮಾರು 100 ಮಂದಿ ಶಾಸಕರು ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿದ್ದು, ಹಣದುಬ್ಬರಕ್ಕೆ ಕಾರಣವಾಗಿದೆ ಎಂದು ಆರೋಪಿಸಿ ಮಾರ್ಚ್ 8 ರಂದು ರಾಷ್ಟ್ರೀಯ ಅಸೆಂಬ್ಲಿ ಸಚಿವಾಲಯದ ಮುಂದೆ ಅವಿಶ್ವಾಸ ನಿರ್ಣಯ ಸಲ್ಲಿಸಿದರು. ಇದೀಗ ವಿರೋಧ ಪಕ್ಷಗಳು ಸಂಸತ್ತಿನಲ್ಲಿ ಮಂಡಿಸಿದ ಅವಿಶ್ವಾಸ ನಿರ್ಣಯದ ಮೇಲೆ ಇಮ್ರಾನ್ ಖಾನ್ ವಿರುದ್ಧ ಮತ ಹಾಕುವುದಾಗಿ ಬಹಿರಂಗವಾಗಿಯೇ ಅತೃಪ್ತರು ಹೇಳಿಕೆ ನೀಡಿದ್ದಾರೆ.
ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿ ಅಧಿವೇಶನ ಮಾರ್ಚ್ 21ರಂದು ನಡೆಯುವ ನಿರೀಕ್ಷೆಯಿದ್ದು, ಮಾರ್ಚ್ 28 ರಂದು ಅವಿಶ್ವಾಸ ನಿರ್ಣಯದ ಮತದಾನ ನಡೆಯುವ ಸಾಧ್ಯತೆಯಿದೆ. ಇದೇ ವೇಳೆ ಇಮ್ರಾನ್ ಖಾನ್ ಪಕ್ಷದ ಸುಮಾರು 24 ಸಂಸದರು ಪಕ್ಷ ತೊರೆಯಲೂ ಸಿದ್ಧರಾಗಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಪಾಕಿಸ್ತಾನದಲ್ಲಿ ರೆಸಾರ್ಟ್ ರಾಜಕಾರಣ ನಡೆಯುತ್ತಿದ್ದು, ಅತೃಪ್ತರು ಇಸ್ಲಾಮಾಬಾದ್ನ ಸಿಂಧ್ ಹೌಸ್ನಲ್ಲಿ ತಂಗಿದ್ದಾರೆ. ಈ ಬಗ್ಗೆ ಹಲವಾರು ಆರೋಪ-ಪ್ರತ್ಯಾರೋಪಗಳೂ ನಡೆಯುತ್ತಿವೆ.
ಸದ್ಯ 24 ಮಂದಿ ಅತೃಪ್ತರ ಕೈಯಲ್ಲಿ ಇಮ್ರಾನ್ ರಾಜಕೀಯ ಭವಿಷ್ಯ ಅಡಗಿದ್ದು, ಮಾರ್ಚ್ 28ರವರೆಗೆ ಕಾದು ನೋಡಬೇಕಿದೆ.