ಕೊಲೊಂಬೊ, ಮಾ 19 (DaijiworldNews/DB): ಶ್ರೀಲಂಕಾದಲ್ಲಿ ಉಂಟಾಗಿರುವ ತೀವ್ರ ಆರ್ಥಿಕ ಮುಗ್ಗಟ್ಟಿನಿಂದಾಗಿ ಕಾಗದ ಕೊಳ್ಳಲೂ ಸಾಧ್ಯವಾಗದೆ ಸೋಮವಾರದಿಂದ ಆರಂಭವಾಗಬೇಕಿದ್ದ ವಿದ್ಯಾರ್ಥಿಗಳ ಶೈಕ್ಷಣಿಕ ಪರೀಕ್ಷೆಗಳನ್ನು ಮುಂದೂಡಲಾಗಿದೆ.
1948ರ ಬಳಿಕ ಇದೇ ಮೊದಲ ಬಾರಿಗೆ ಶ್ರೀಲಂಕಾದಲ್ಲಿ ತೀವ್ರ ಆರ್ಥಿಕ ಮುಗ್ಗಟ್ಟು ತಲೆದೋರಿದೆ. ವಿದೇಶೀ ವಿನಿಮಯ ಪಾವತಿ ಕೊರತೆಯಿಂದಾಗಿ ಕಾಗದವನ್ನು ಆಮದು ಮಾಡಿಕೊಳ್ಳಲು ಸಾಧ್ಯವಾಗದೆ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಗಳನ್ನೇ ಮುಂದೂಡಲಾಗಿದೆ. ಪರೀಕ್ಷೆ ಬರೆದು ಮುಂದಿನ ತರಗತಿಗಳಿಗೆ ತೆರಳಬೇಕಿದ್ದ 4.5 ಲಕ್ಷ ವಿದ್ಯಾರ್ಥಿಗಳಿಗೆ ಇದು ಸಮಸ್ಯೆಯುಂಟು ಮಾಡಿದೆ. ಆಹಾರ, ಔಷಧ, ತೈಲದ ಕೊರತೆಯೂ ಎದುರಾಗಿದೆ ಎಂಬುದಾಗಿ ಅಲ್ಲಿನ ಸರ್ಕಾರ ತಿಳಿಸಿದೆ.
ವಾರ್ಷಿಕ 6.9 ಬಿಲಿಯನ್ ಡಾಲರ್ ವಿದೇಶಿ ವಿನಿಮಯ ಶ್ರೀಲಂಕಾಕ್ಕೆ ಬೇಕಾಗುತ್ತದೆ. ಆದರೆ, ಫೆಬ್ರವರಿ ಆಂತ್ಯದ ವೇಳೆಗೆ 2.3 ಮಿಲಿಯನ್ ವಿದೇಶಿ ವಿನಿಮಯ ಮಾತ್ರ ಕಂಡು ಬಂದಿದೆ. ಶ್ರೀಲಂಕಾಕ್ಕೆ ಅತಿ ಹೆಚ್ಚು ಸಾಲ ನೀಡುವ ದೇಶಗಳಲ್ಲಿ ಚೀನಾ ಮೊದಲನೆಯದ್ದಾಗಿದ್ದು, ಈ ಬಾರಿ ಹೆಚ್ಚು ಸಾಲ ಕೇಳಿದ್ದರೂ ಯಾವುದೇ ಪ್ರತಿಕ್ರಿಯೆ ಚೀನಾ ಕಡೆಯಿಂದ ಬಂದಿರಲಿಲ್ಲ ಎಂಬುದಾಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ದೇಶಕ್ಕೆ ಎದುರಾಗಿರುವ ಆರ್ಥಿಕ ಮುಗ್ಗಟ್ಟಿನ ಕುರಿತು ಶ್ರೀಲಂಕಾ ಅಧ್ಯಕ್ಷ ಗೋತಬಯಾ ರಾಜಪಕ್ಷೆ ಅವರು ಅಂತಾರಾಷ್ಟ್ರೀಯ ಹಣಕಾಸು ನಿಧಿ ಮುಖ್ಯಸ್ಥರ ಜೊತೆ ಬುಧವಾರ ಮಾತುಕತೆ ನಡೆಸಿದ್ದರು.