ವಾಷಿಂಗ್ಟನ್ , ಮಾ 21 (DaijiworldNews/MS): ಈ ಹಿಂದೆ ಅಫ್ಘಾನಿಸ್ತಾನದ ಹಣಕಾಸು ಸಚಿವರಾಗಿ 600 ಕೋಟಿ ಡಾಲರ್ ಬಜೆಟ್ ಅನ್ನು ಮಂಡಿಸಿದ್ದ ಖಾಲಿದ್ ಪಯೆಂಡಾ ಅವರು ತಮ್ಮ ಕುಟುಂಬದ ನಿರ್ವಹಣೆಗಾಗಿ ಅಮೆರಿಕಾದ ವಾಷಿಂಗ್ಟನ್ ಡಿಸಿಯಲ್ಲಿ ಉಬರ್ ಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ವರದಿಯಾಗಿದೆ. ಅಪ್ಘಾನಿಸ್ತಾನದಲ್ಲಿ ಪ್ರಜಾಪ್ರಭುತ್ವವನ್ನು ಹೊಸಕಿ ಹಾಕಿ ತಾಲಿಬಾನಿಗಳು ಅಧಿಕಾರ ವಹಿಸಿಕೊಂಡ ನಂತರ ನೂರಾರು ಮಂದಿ ಪ್ರಾಣ ಉಳಿಸಿಕೊಳ್ಳವುದಕ್ಕಾಗಿ ದೇಶ ತೊರೆದಿದ್ದರು. ಅವರಲ್ಲಿ ಅಫ್ಘಾನಿಸ್ತಾನದ ಹಣಕಾಸು ಸಚಿವರಾಗಿದ್ದ ಖಾಲಿದ್ ಪಯೆಂಡಾ ಕೂಡಾ ಒಬ್ಬರು.
ಅಶ್ರಫ್ ಘನಿ ಸರ್ಕಾರದ ಕೊನೆಯ ಹಣಕಾಸು ಮಂತ್ರಿಯಾಗಿದ್ದ ಖಾಲಿದ್ ಪಯೆಂಡಾ ಅವರು, ವಾಷಿಂಗ್ಟನ್ ಪೋಸ್ಟ್ಗೆ ನೀಡಿದ ಸಂದರ್ಶನದಲ್ಲಿ, ಆರು ಗಂಟೆಗಳ ಕೆಲಸ ಮಾಡಿ 150 ಡಾಲರ್ಗಳಿಗಿಂತ ಸ್ವಲ್ಪ ಹೆಚ್ಚು ಗಳಿಸುತ್ತಿದ್ದೇನೆ. ಹೆಂಡತಿ ಮತ್ತು ನಾಲ್ಕು ಮಕ್ಕಳ ಕುಟುಂಬವನ್ನು ಸಾಕಲು ಸಿಕ್ಕಿದ ಈ ಕೆಲಸಕ್ಕಾಗಿ ಕೃತಜ್ಞನಾಗಿದ್ದೇನೆ" ಎಂದು ಹೇಳಿದ್ದಾರೆ.
ಅಫ್ಘಾನಿಸ್ತಾನದ ಮಾಜಿ ಹಣಕಾಸು ಸಚಿವಖಾಲಿದ್ ಪಯೆಂಡಾ ಅವರು ಕಾಬೂಲ್ನ್ನು ತಾಲಿಬಾನ್ ಉಗ್ರರು ವಶಪಡಿಸಿಕೊಳ್ಳುವ ಕೆಲವು ದಿನಗಳ ಮೊದಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಈಗ ವಾಷಿಂಗ್ಟನ್ ಪೋಸ್ಟ್ ವರದಿಯ ಪ್ರಕಾರ ಖಾಲಿದ್ ವಾಷಿಂಗ್ಟನ್ ಡಿಸಿಯಲ್ಲಿ ಉಬರ್ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಪಯೆಂಡಾ ಜಾರ್ಜ್ಟೌನ್ ವಿಶ್ವವಿದ್ಯಾನಿಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿಯೂ ಕೆಲಸ ಮಾಡುತ್ತಾರೆ. ಸದ್ಯ, ನನಗೆ ಯಾವುದೇ ಸ್ಥಳವಿಲ್ಲ. ನಾನು ಇಲ್ಲಿಗೆ ಸೇರಿದವನಲ್ಲ, ಮತ್ತು ನಾನು ಅಲ್ಲಿಗೂ ಸೇರಿದವನಲ್ಲ ಇದು ತುಂಬಾ ಖಾಲಿ ಭಾವನೆ ಎಂದು ಖಾಲಿದ್ ಹೇಳಿದ್ದಾರೆ
ಕಳೆದ ಆಗಸ್ಟ್ 10 ರಂದು ಮತ್ತೆ ಟ್ವೀಟ್ ಮಾಡಿದ್ದ ಅವರು, "ಇಂದು ನಾನು ಹಂಗಾಮಿ ಹಣಕಾಸು ಸಚಿವ ಸ್ಥಾನದಿಂದ ಕೆಳಗಿಳಿದಿದ್ದೇನೆ. ಹಣಕಾಸು ಸಚಿವಾಲಯವನ್ನು ಮುನ್ನಡೆಸಿದ್ದು ನನ್ನ ಜೀವನದ ಶ್ರೇಷ್ಠ ಗೌರವವಾಗಿದೆ. ಆದರೆ ವೈಯಕ್ತಿಕ ಕಾರಣಗಳಿಗಾಗಿ ಈ ಸ್ಥಾನದಿಂದ ಕೆಳಗಿಳಿಯುತ್ತಿದ್ದೇನೆ" ಎಂದು ಹೇಳಿದ್ದರು.
ಅಫ್ಘಾನಿಸ್ತಾನದ ಪ್ರಸ್ತುತ ಪರಿಸ್ಥಿತಿಗೆ ತಾನು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾವನ್ನು ದೂಷಿಸುತ್ತೇನೆ. ಅಮೆರಿಕಾ ತನ್ನ ಸೈನ್ಯವನ್ನು ಹಿಂತೆಗೆದುಕೊಂಡಿದ್ದರಿಂದ ದೇಶವನ್ನು ತಾಲಿಬಾನ್ ಸ್ವಾಧೀನಪಡಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿತು ಎಂದು ಅವರು ಹೇಳಿದ್ದಾರೆ.