ಉಕ್ರೇನ್, ಮಾ 25 (DaijiworldNews/DB): ರಷ್ಯಾ ವಶಪಡಿಸಿಕೊಂಡಿದ್ದ ಬೆರ್ಡಿಯಾನ್ಕ್ಸ್ ನ ಅಝೋವ್ ಸಮುದ್ರದ ಬಳಿಯಿರುವ ಬಂದರಿಗೆ ಉಕ್ರೇನ್ ಪಡೆಗಳು ದಾಳಿ ನಡೆಸಿ ರಷ್ಯಾದ ಹಡಗನ್ನು ಗುರುವಾರ ನಾಶಪಡಿಸಿವೆ.
ಈ ಸಂಬಂಧ ಉಕ್ರೇನ್ ವೀಡಿಯೋ ಬಿಡುಗಡೆ ಮಾಡಿದ್ದು, ಬಂದರಿನಲ್ಲಿ ನಿಂತಿದ್ದ ಹಡಗನ್ನು ಉಕ್ರೇನ್ ಸೈನ್ಯ ನಾಶ ಪಡಿಸಿರುವುದು ಗೋಚರಿಸುತ್ತಿದೆ.
ಮೂರು ಹಡಗುಗಳು ಈ ಬಂದರಿನಲ್ಲಿ ನಿಂತಿದ್ದು, ಒಂದು ಸಂಪೂರ್ಣ ನಾಶವಾಗಿದ್ದರೆ, ಇನ್ನೆರಡು ಹಡಗುಗಳಿಗೆ ಹಾನಿಯಾಗಿದೆ. ಆದರೆ, ಹಡಗು ನಾಶವಾಗಿರುವುದರ ಬಗ್ಗೆ ರಷ್ಯಾದ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂಬುದಾಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಆದರೆ ಉಕ್ರೇನ್ ನ ಉಪ ರಕ್ಷಣಾ ಸಚಿವ ಹನ್ನಾ ಮಲಿಯಾರ್ ಅವರು, ಹಡಗು ನಾಶವಾಗಿರುವುದನ್ನು ದೃಢಪಡಿಸಿದ್ದಾರೆ.
ಹಡಗು 45 ಮಂದಿ ಶಸ್ತ್ರಸಜ್ಜಿತ ಸಿಬಂದಿ ಮತ್ತು400 ಮಂದಿಯನ್ನು ಕೊಂಡೊಯ್ಯುವ ಸಾಮರ್ಥ್ಯ ಉಳ್ಳದ್ದಾಗಿದೆ.
ಸುಮಾರು ಒಂದು ತಿಂಗಳ ಹಿಂದೆ ವಿಶೇಷ ಕಾರ್ಯಾಚರಣೆ ಮೂಲಕ ರಷ್ಯಾವು ಅಝೋವ್ ಸಮುದ್ರ ಸಹಿತ ಈ ಬಂದರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಆದರೆ ಇದೀಗ ರಷ್ಯಾ ವಶದಲ್ಲಿರುವ ಬಂದರಿಗೆ ನುಗ್ಗಿ ಉಕ್ರೇನ್ ಹಡಗು ನಾಶಪಡಿಸಿದೆ.