ಥೈಲ್ಯಾಂಡ್, ಮಾ 25 (DaijiworldNews/DB): ಮುಂಬಯಿಯಲ್ಲಿರುವ ಪತ್ನಿಯನ್ನು ಭೇಟಿಯಾಗಲು ವಿಯೆಟ್ನಾಂನ ವ್ಯಕ್ತಿಯೊಬ್ಬ ಥೈಲ್ಯಾಂಡ್ ನ ಫುಕೆಟ್ ನಿಂದ ಭಾರತಕ್ಕೆ ಗಾಳಿಯಾಡುತ್ತಿದ್ದ ರಾಫ್ಟಿಂಗ್ ಬೋಟ್ ನಲ್ಲಿ ಬರುವ ಸಾಹಸಕ್ಕೆ ಮುಂದಾಗಿದ್ದಾನೆ. ಆದರೆ, ಥೈಲ್ಯಾಂಡ್ ಅಧಿಕಾರಿಗಳು ಆತನನ್ನು ರಕ್ಷಿಸಿದ್ದಾರೆ.
ವ್ಯಕ್ತಿಯನ್ನು ವಿಯೆಟ್ನಾದ ಹೊ ಹಾಂಗ್ ಹುಂಗ್ (37) ಎಂದು ಗುರುತಿಸಲಾಗಿದೆ. ಕೊರೊನಾದಿಂದಾಗಿ ಮುಂಬೈಯಲ್ಲಿ ಲಾಕ್ ಡೌನ್ ಹೇರಿದ್ದರಿಂದ ಕಳೆದ ಎರಡು ವರ್ಷಗಳಿಂದ ಈ ವ್ಯಕ್ತಿಗೆ ಪತ್ನಿಯನ್ನು ನೋಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಫುಕೆಟ್ ನಿಂದ ಭಾರತಕ್ಕೆ ಸಮುದ್ರಮಾರ್ಗವಾಗಿ ಸುಮಾರು 2,000 ಕಿಮೀ ದೂರಕ್ಕೆ ರಾಫ್ಟಿಂಗ್ ದೋಣಿಯಲ್ಲಿ ಬರಲು ಯತ್ನಿಸಿದ್ದಾನೆ. ಆತ ಸಂಚರಿಸಲು ಯತ್ನಿಸಿದ್ದ ದೋಣಿಯು ಗಾಳಿಯಾಡುವಂತದ್ದಾಗಿದ್ದು, ಅಪಾಯದ ಮುನ್ಸೂಚನೆ ಅರಿತ ಸಂಬಂಧಪಟ್ಟ ಅಧಿಕಾರಿಗಳು ಥೈಲ್ಯಾಂಡ್ ನಲ್ಲಿ ಆತನನ್ನು ರಕ್ಷಿಸಿದ್ದಾರೆ ಎನ್ನಲಾಗಿದೆ.
ವರದಿಗಳ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ ಸದ್ಯ ಚಂಡಮಾರುತದ ಭೀತಿ ಇದ್ದು, ಆತ ಅಲ್ಲೇ ಹಾದು ಬರುವವನಿದ್ದ ಎನ್ನಲಾಗಿದೆ. ಪತ್ನಿಯಿದ್ದಲ್ಲಿಗೆ ತಲುಪಲು ಇದೊಂದು ಪ್ರಯತ್ನ ಎಂಬುದಾಗಿ ಆತ ಅಧಿಕಾರಿಗಳು ವಿಚಾರಿಸುವ ವೇಳೆ ತಿಳಿಸಿದ್ದಾನೆ.
ಥೈ ಮರಿಟೈಮ್ ಎನ್ ಫೋರ್ಸ್ ಮೆಂಟ್ ಕಮಾಂಡ್ ಸೆಂಟರ್ ನ ಕ್ಯಾಪ್ಟನ್ ಪಿಚೆಟ್ ಸಾಂಗ್ಟನ್ ಮಾಹಿತಿ ಪ್ರಕಾರ, ಈ ವ್ಯಕ್ತಿಯ ಬಳಿ ಹೇಗೆ ಸಾಗಬೇಕೆಂಬ ನಕ್ಷೆಯಾಗಲಿ, ಜಿಪಿಎಸ್ ಆಗಲೀ ಇರಲಿಲ್ಲ. ಸ್ವಲ್ಪ ಪ್ರಮಾಣದ ಕುಡಿಯುವ ನೀರನ್ನಷ್ಟೇ ತನ್ನ ಬಳಿ ಇರಿಸಿಕೊಂಡಿದ್ದ ಎಂದು ತಿಳಿಸಿದ್ದಾರೆ.