ಸೌದಿ ಅರೇಬಿಯಾ, ಮಾ 26 (DaijiworldNews/DB): ಸೌದಿ ಅರೇಬಿಯಾದಲ್ಲಿ ಯೆಮೆನ್ ನ ಹೌತಿ ಬಂಡುಕೋರರ ಹಾವಳಿ ಹೆಚ್ಚಾಗಿದ್ದು, ಶುಕ್ರವಾರ ಇಲ್ಲಿನ ಜೆದ್ದಾಹ್ ನಲ್ಲಿರುವ ಸೌದಿಯ ಅತಿದೊಡ್ಡ ತೈಲ ಕಂಪೆನಿ ಆರಾಮ್ಕೋದ ತೈಲ ಸಂಗ್ರಹಾಗಾರಗಳ ಮೇಲೆ ದಾಳಿ ಮಾಡಿದೆ.
ಹೌತಿ ಬಂಡುಕೋರರ ದಾಳಿಯಿಂದಾಗಿ ತೈಲ ಕಂಪೆನಿಯಲ್ಲಿರುವ ಎರಡು ಟ್ಯಾಂಕ್ ಗಳಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ಗಾಢ ಕಡು ಬಣ್ಣದ ಹೊಗೆ ಸೃಷ್ಟಿಯಾಗಿ ಜನ ಆತಂಕಕ್ಕೊಳಗಾಗಿದ್ದರು. ಸದ್ಯ ಸೌದಿ ಆಡಳಿತವು ಬೆಂಕಿ ನಂದಿಸಲು ಎಲ್ಲಾ ರೀತಿಯ ಕ್ರಮ ಕೈಗೊಂಡಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಕಂಪೆನಿ ಮೇಲೆ ಹೌತಿ ಬಂಡುಕೋರರು ಕೆಲ ದಿನಗಳ ಹಿಂದೆಯೇ ಕಣ್ಣಿಟ್ಟಿದ್ದರು ಎನ್ನಲಾಗಿದೆ.
ಸೌದಿ ಇಂಧನ ಸಚಿವಾಲಯವು ಘಟನೆಯನ್ನು ಖಂಡಿಸಿದ್ದು, ವಿಶ್ವಕ್ಕೇ ಇಂಧನ, ತೈಲ ರಫ್ತಾಗುವಂತಹ ಘಟಕಗಳ ಮೇಲೆ ಇಂತಹ ಧಾಳಿ ನಡೆಸುವುದು ಖಂಡನೀಯ ಎಂದಿದೆ.
ಹೌತಿ ಮಿಲಿಟರಿ ವಕ್ತಾರ ಯಾಹ್ಯಾ ಸಾರಿಯ ಶುಕ್ರವಾರ ತಡವಾಗಿ ಈ ದಾಳಿ ಕುರಿತು ಪ್ರತಿಕ್ರಿಯೆ ನೀಡಿದ್ದು, ಆರಾಮ್ಕೋ ಕಂಪೆನಿ ಮೇಲೆ ಕ್ಷಿಪಣಿ ದಾಳಿ ನಡೆಸಿ ಸೌಲಭ್ಯಗಳನ್ನು ಹಾನಿಗೊಳಿಸಲಾಗಿದೆ. ಅಲ್ಲದೆ ರಾಸ್ ಟನುರಾ ಮತ್ತು ರಾಬಿಘ್ ರಿಫೈನರಿಗಳ ಮೇಲೆ ಡ್ರೋನ್ ದಾಳಿ ನಡೆಸಲಾಗಿದೆ . ಸೌದಿ ರಾಜಧಾನಿ ರಿಯಾದ್ ನಲ್ಲಿರುವ ವೈಟಲ್ ಸೌಲಭ್ಯಗಳ ಮೇಲೆಯೂ ದಾಳಿ ಮಾಡಲು ಯೋಜಿಸಲಾಗಿತ್ತು. ಜಿಹಾನ್, ನಜ್ರಾನ್, ರಾಸ್ ತನುರಾ ಮತ್ತು ರಾಬಿಘ್ ನಲ್ಲಿರುವ ಆರಾಮ್ಕೋ ಕೇಂದ್ರಗಳ ಮೇಲೆಯೂ ಡ್ರೋನ್ ದಾಳಿ ನಡೆಸಲಾಗಿದೆ ಎಂದು ತಿಳಿಸಿರುವುದಾಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಹೌತಿಗಳು ನಾಗರಿಕರ ಮೂಲಭೂತ ಸೌಲಭ್ಯಗಳ ಮೇಲೆ ಭಯೋತ್ಪಾದಕ ದಾಳಿ ನಡೆಸುವ ಮೂಲಕ ತಮ್ಮ ನೀಚ ಪ್ರವೃತ್ತಿಯನ್ನು ಪವಿತ್ರ ರಂಝಾನ್ ತಿಂಗಳಲ್ಲಿಯೂ ಮುಂದುವರಿಸುತ್ತಿರುವುದು ಅಮಾನುಷವಾಗಿದೆ ಎಂದು ಇಲ್ಲಿನ ಯುಎಸ್ ಕಾರ್ಯದರ್ಶಿ ಆಂಟನಿ ಬ್ಲಿಂಕನ್ ಹೇಳಿದ್ದಾರೆ.