ಕೀವ್, ಮಾ 27 (DaijiworldNews/DB): ರಷ್ಯಾ-ಉಕ್ರೇನ್ ನಡುವಿನ ಯುದ್ದ ದಿನದಿಂದ ದಿನಕ್ಕೆ ಬಿರುಸು ಪಡೆಯುತ್ತಿದ್ದು, ರಷ್ಯಾ ಉಕ್ರೇನ್ ನ ಹಲವಾರು ಪ್ರಮುಖ ನಗರಗಳನ್ನು ಈಗಾಗಲೇ ತನ್ನ ವಶಕ್ಕೆ ಪಡೆದುಕೊಂಡಿದೆ. ಇದೀಗ ಉಕ್ರೇನ್ನ ಎಲ್ವಿವ್ ನಗರದ ಮೇಲೆಯೂ ರಷ್ಯಾದಿಂದ ರಾಕೆಟ್ ದಾಳಿ ನಡೆದಿದೆ.
ಈ ರಾಕೆಟ್ ದಾಳಿಯಲ್ಲಿ ಐವರು ಗಾಯಗೊಂಡಿದ್ದಾರೆ. ಹಲವರು ನಿರಾಶ್ರಿತರಾಗಿದ್ದು, ಅವರೆಲ್ಲರಿಗೂ ಆಶ್ರಯ ಕಲ್ಪಿಸಲು ಅಧಿಕಾರಿಗಳು ಶ್ರಮಿಸುತ್ತಿದ್ದಾರೆ ಎಂಬುದಾಗಿ ಅಲ್ಲಿನ ಗವರ್ನರ್ ಮ್ಯಾಕ್ಸಿಮ್ ಕೊಜಿಟ್ಸಕಿ ಅವರು ಮಾಹಿತಿ ನೀಡಿದ್ದಾರೆ ಎಂಬುದಾಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಯುದ್ಧ ಮುಂದುವರಿಸುತ್ತಿರುವ ರಷ್ಯಾಕ್ಕೆ ಅಮೆರಿಕಾ ಎಚ್ಚರಿಕೆ ಕೊಡುತ್ತಲೇ ಬಂದಿದ್ದು, ಮುಂದೆ ಮತ್ತೂ ದೊಡ್ಡ ಹೋರಾಟವಿದೆ. ಎಲ್ಲಾ ದೇಶಗಳು ರಷ್ಯಾದ ನಿಲುವನ್ನು ವಿರೋಧಿಸಬೇಕು. ರಷ್ಯಾವು ಉಕ್ರೇನ್ ಮೇಲೆ ನಡೆಸುತ್ತಿರುವ ಯುದ್ದವು ಅವರ ಕಾರ್ಯತಂತ್ರದ ವೈಫಲ್ಯ ಎಂಬುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ಪೋಲೆಂಡ್ ಭೇಟಿಯ ವೇಳೆ ಅಮೆರಿಕಾ ಅಧ್ಯಕ್ಷರು ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ರಷ್ಯಾ ಉಕ್ರೇನ್ ಮೇಲೆ ನಡೆಸುತ್ತಿರುವ ಯುದ್ದಕ್ಕೆ ತಿಂಗಳು ಕಳೆದಿದೆ. ಈಗಾಗಲೇ ಸುಮಾರು 30 ಲಕ್ಷ ಜನರು ಉಕ್ರೇನ್ ತೊರೆದು ಬೇರೆಡೆಗಳಿಗೆ ವಲಸೆ ಹೋಗಿದ್ದಾರೆ. ಹಲವಾರು ಮಂದಿ ಸಾವಿಗೀಡಾಗಿದ್ದಾರೆ ಎನ್ನಲಾಗಿದೆ.