ಮಾಸ್ಕೋ, ಮಾ 29 (DaijiworldNews/DB): ಉಕ್ರೇನ್ ವಿರುದ್ದ ಪರಮಾಣು ಶಸ್ತ್ರಾಸ್ತ್ರ ಬಳಕೆ ಮಾಡುವ ಉದ್ದೇಶ ರಷ್ಯಾದ ಮುಂದಿಲ್ಲ. ಆದರೆ ದೇಶದ ಅಸ್ತಿತ್ವಕ್ಕೆ ಧಕ್ಕೆ ಆದಲ್ಲಿ ಇದರ ಬಳಕೆ ಅನಿವಾರ್ಯ ಎಂದು ರಷ್ಯಾದ ವಕ್ತಾರ ಡೆಮಿಟ್ರಿ ಪೆಸ್ಕೋವ್ ಹೇಳಿದ್ದಾರೆ.
ಸುದ್ದಿಸಂಸ್ಥೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅವರು, ರಷ್ಯಾ-ಉಕ್ರೇನ್ ಯುದ್ದ ಕಳೆದೊಂದು ತಿಂಗಳಿನಿಂದ ನಡೆಯುತ್ತಿದ್ದು, ನಾವು ಪರಮಾಣು ಶಸ್ತ್ರಾಸ್ತ್ರ ಬಳಕೆಯ ಉದ್ದೇಶ ಹೊಂದಿಲ್ಲ. ಯುದ್ದದ ಫಲಿತಾಂಶ ಯಾವುದೇ ರೀತಿಯದ್ದಾದರೂ ಇದರ ಬಳಕೆ ಮಾಡುವುದಿಲ್ಲ. ಆದರೆ ದೇಶದ ಅಸ್ತಿತ್ವಕ್ಕೆ ಧಕ್ಕೆಯಾದರೆ ಮಾತ್ರ ಬಳಕೆ ಅನಿವಾರ್ಯವಾಗಲಿದೆ. ಯಾಕೆಂದರೆ ನಮ್ಮ ದೇಶದಲ್ಲಿ ಭದ್ರತಾ ನೀತಿ ಅಸ್ತಿತ್ವದಲ್ಲಿ ಇದೆ ಎಂದಿದ್ದಾರೆ.
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧಕ್ಕೆ ತಿಂಗಳು ದಾಟಿದೆ. ಈಗಾಗಲೇ ರಷ್ಯಾವು ಉಕ್ರೇನ್ ನ ಹಲವು ಭಾಗಗಳನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ. ಈ ನಡುವೆ ರಷ್ಯಾ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಕೆ ಮಾಡಲಿದೆ ಎಂಬ ಸುದ್ದಿಗಳು ಈ ಹಿಂದೆ ಹರಿದಾಡುತ್ತಿದ್ದವು. ಈ ಹಿನ್ನೆಲೆಯಲ್ಲಿ ಅವರು ಇದೀಗ ಸ್ಪಷ್ಟನೆ ನೀಡಿದ್ದಾರೆ.