ಲಾಸ್ ಎಂಜಲೀಸ್, ಮಾ 29 (DaijiworldNews/MS): ಚಿತ್ರ ಜಗತ್ತಿನ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವೇದಿಕೆ ಮೇಲೆ ಹಾಸ್ಯ ನಟ, ನಿರೂಪಕ ಕ್ರಿಸ್ ರಾಕ್ ಅವರ ಕಪಾಳಕ್ಕೆ ನಟ ವಿಲ್ ಸ್ಮಿತ್ ಹೊಡೆದ ಘಟನೆ ಬಗ್ಗೆ ಖುದ್ದು ವಿಲ್ ಸ್ಮಿತ್ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.
ಪತ್ನಿ ಜಡಾ ಪಿಂಕೆಟ್ ಬಗ್ಗೆ ಕ್ರಿಸ್ ರಾಕ್ ಗೇಲಿ ಮಾಡಿದ್ದಕ್ಕೆ ಕೋಪಗೊಂಡಿದ್ದ ವಿಲ್ ಸ್ಮಿತ್ ವೇದಿಕೆ ಮೇಲೆಯೇ ಕಪಾಳಕ್ಕೆ ಬಾರಿಸಿದ್ದರು. ಕ್ರಿಸ್ ರಾಕ್ ಕೆನ್ನೆಗೆ ಹೊಡೆದ ಘಟನೆ ಬಗ್ಗೆ ವಿಲ್ ಸ್ಮಿತ್ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ಮೂಲಕ ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ. "ನಾನು ನಿಮ್ಮಲ್ಲಿ ಸಾರ್ವಜನಿಕವಾಗಿ ಕ್ಷಮೆಯಾಚಿಸಲು ಬಯಸುತ್ತೇನೆ. ನನ್ನಿಂದ ತಪ್ಪಾಗಿದೆ. ನಾನು ಮುಜುಗರಕ್ಕೊಳಗಾಗಿದ್ದೇನೆ. ಪ್ರೀತಿ ಮತ್ತು ದಯೆ ಇರುವ ಜಗತ್ತಿನಲ್ಲಿ ಹಿಂಸೆಗೆ ಜಾಗವಿಲ್ಲ" ಎಂದು ಕ್ಷಮೆ ಯಾಚಿಸಿದ್ದಾರೆ.
ಹಿಂಸಾಚಾರದ ಎಲ್ಲಾ ರೂಪಗಳು ವಿಷಕಾರಿ ಮತ್ತು ವಿನಾಶಕಾರಿ. ಕಳೆದ ರಾತ್ರಿ ನಡೆದ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನನ್ನ ನಡವಳಿಕೆ ಸ್ವೀಕಾರ್ಹವಲ್ಲ ಮತ್ತು ಕ್ಷಮಿಸಲಾರ್ಹವಲ್ಲ. ಜೋಕ್ಗಳು ಕೆಲಸದ ಒಂದು ಭಾಗ. ಆದರೆ, ಜಡಾ ಅವರ ಮೆಡಿಕಲ್ ಸಮಸ್ಯೆ ಬಗ್ಗೆ ಜೋಕ್ ಮಾಡಿದ್ದು ನನಗೆ ಸಹಿಸಲಾಗದಷ್ಟು ಕೋಪ ಬಂತು. ಹೀಗಾಗಿ ನಾನು ಭಾವನಾತ್ಕಕವಾಗಿ ಪ್ರತಿಕ್ರಿಯಿಸಿದೆ. ಆಸ್ಕರ್ ಅಕಾಡೆಮಿ ಪ್ರಶಸ್ತಿ ಸಮಾರಂಭದ ವೇದಿಕೆ ಮೇಲೆ ನಾನು ತೋರಿದ ವರ್ತನೆ ಸ್ವೀಕಾರಾರ್ಹವಲ್ಲ ಹಾಗೂ ಅದನ್ನು ಕ್ಷಮಿಸಲಾಗದು. ನಾನು ತಪ್ಪು ಮಾಡಿದ್ದೇನೆ ಎಂದು ಹಾಲಿವುಡ್ ನಟ ಹೇಳಿಕೊಂಡಿದ್ದಾರೆ.