ವಾಷಿಂಗ್ಟನ್, ಮಾ 31 (DaijiworldNews/DB): ಉಕ್ರೇನ್-ರಷ್ಯಾ ಸಮರದಿಂದಾಗಿ ಉಕ್ರೇನ್ ನಲ್ಲಿ ಹದಗೆಡುತ್ತಿರುವ ಪರಿಸ್ಥಿತಿ ಮತ್ತು ಜನಜೀವನದ ಆದ್ಯತೆಗಳ ಕುರಿತು ಯುಎಸ್ ರಾಜ್ಯ ಕಾರ್ಯದರ್ಶಿ ಆಂಟೊನಿ ಬ್ಲಿಂಕನ್ ಅವರು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರೊಂದಿಗೆ ಬುಧವಾರ ಮಾತುಕತೆ ನಡೆಸಿದರು.
ಯುಎಸ್ ರಾಜ್ಯ ಸಚಿವಾಲಯದ ವಕ್ತಾರ ನೆಡ್ ಪ್ರೈಸ್ ಈ ಕುರಿತು ಮಾಹಿತಿ ನೀಡಿ, ಉಕ್ರೇನ್ ನಲ್ಲಿ ಮಾನವೀಯ ಪರಿಸ್ಥಿತಿ ತೀರಾ ಹದಗೆಡುತ್ತಿದೆ. ಈ ಕುರಿತು ಮತ್ತು ಅಲ್ಲಿನ ಪ್ರಾದೇಶಿಕ ಆದ್ಯತೆಗಳ ಬಗ್ಗೆ ಇತರ ರಾಷ್ಟ್ರಗಳು ಮಾತನಾಡಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಮುಕ್ತವಾಗಿ ಕೈ ಜೋಡಿಸುವ ಅಗತ್ಯವಿದೆ ಎಂದರು.
ಮುಕ್ತ, ಸುರಕ್ಷಿತ, ಸಮೃದ್ಧ ಇಂಡೊ-ಪೆಸಿಫಿಕ್ ವಿಚಾರಕ್ಕೆ ಪ್ರೋತ್ಸಾಹದ ಅಗತ್ಯತೆ ಕುರಿತೂ ಇಬ್ಬರು ನಾಯಕರು ಚರ್ಚೆ ನಡೆಸಿದರು. ಕಳೆದ ತಿಂಗಳು ಬ್ಲಿಂಕನ್ ಅವರು ಜೈ ಶಂಕರ್ ಅವರಿಗೆ ದೂರವಾಣಿ ಕರೆ ಮಾಡಿ, ರಷ್ಯಾ ಉಕ್ರೇನ್ ಮೇಲೆ ನಡೆಸುತ್ತಿರುವ ಆಕ್ರಮಣ ಖಂಡನೀಯ. ಈ ಆಕ್ರಮಣ ಸಂಬಂಧಿಸಿದಂತೆ ಎಲ್ಲ ರಾಷ್ಟ್ರಗಳು ಸಾಮೂಹಿಕ ಪ್ರತಿಕ್ರಿಯೆ ರವಾನಿಸಬೇಕು ಎಂದಿದ್ದರು.
ಬ್ಲಿಂಕನ್ ಅವರು ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾದ ಮೂರು ರಾಷ್ಟ್ರಗಳಿಗೂ ಇದೇ ವೇಳೆ ಭೇಟಿ ನೀಡಿದರು. ರಷ್ಯಾ ಉಕ್ರೇನ್ ಮೇಲೆ ದಾಳಿ ಮಾಡಿದ ಪರಿಣಾಮ ಈ ಎರಡು ದೇಶಗಳೂ ಅನೇಕ ಸಮಸ್ಯೆ ಅನುಭವಿಸಿವೆ. ಅಲ್ಜೀರಿಯಾ ರಷ್ಯಾದೊಂದಿಗಿನ ಬಾಂಧವ್ಯವನ್ನು ಕಡಿಮೆ ಮಾಡಬೇಕು ಎಂದು ಅವರು ಇದೇ ವೇಳೆ ಒತ್ತಾಯಿಸಿದ್ದಾರೆ.