ಲಾಸ್ ಎಂಜಲೀಸ್, ಮಾ 31 (DaijiworldNews/MS): ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದ ವೇದಿಕೆಯಲ್ಲಿ ನಟ, ನಿರೂಪಕ ಕ್ರಿಸ್ ರಾಕ್ ಅವರನ್ನು ಹೊಡೆದ ನಂತರ ನಟ ವಿಲ್ ಸ್ಮಿತ್ ಅವರನ್ನು ಆಸ್ಕರ್ ಸಮಾರಂಭದಿಂದ ಹೊರಹೋಗುವಂತೆ ಸೂಚಿಸಲಾಯಿತಾದರೂ, ಅಲ್ಲಿಂದ ತೆರಳಲು ಸ್ಮಿತ್ ನಿರಾಕರಿಸಿದ್ದರು ಎಂದು 'ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ ಮತ್ತು ಸೈನ್ಸ್' ತಿಳಿಸಿದೆ.
ಅಲ್ಲದೆ ಈಗಾಗಲೇ ಅಕಾಡೆಮಿಯೂ ಸ್ಮಿತ್ ವಿರುದ್ಧ "ಶಿಸ್ತಿನ ಕ್ರಮಗಳನ್ನು" ಪ್ರಾರಂಭಿಸಿದೆ ಎಂದು ಹೇಳಿದೆ.
ತಮ್ಮ ಹೆಂಡತಿ ಜಡಾ ಪಿಂಕೆಟ್ ಸ್ಮಿತ್ ಅವರ ಬೋಳಿಸಿಕೊಂಡ ತಲೆಯ ಬಗ್ಗೆ ಹಾಸ್ಯ ಮಾಡಿದ ನಂತರ ನಟ ಸ್ಮಿತ್, ನಿರೂಪಕ ಕ್ರಿಸ್ ರಾಕ್ ಕಪಾಳಮೋಕ್ಷ ಮಾಡಿದ್ದರು. ಸಮಾರಂಭದಲ್ಲಿ ತಮ್ಮ ವೃತ್ತಿಜೀವನದ ಮೊದಲ ಆಸ್ಕರ್ ಪ್ರಶಸ್ತಿಯನ್ನು ಗೆದ್ದ ನಟ ಆ ಬಳಿಕ ಕ್ಷಮೆಯಾಚಿಸಿದ್ದರು. ವಿಲ್ ಸ್ಮಿತ್ ಅವರು, 'ಕಿಂಗ್ ರಿಚರ್ಡ್' ಚಿತ್ರದಲ್ಲಿನ ನಟನೆಗಾಗಿ ಪ್ರಸಕ್ತ ಸಾಲಿನ 'ಅತ್ಯುತ್ತಮ ನಟ' ಆಸ್ಕರ್ ಪ್ರಶಸ್ತಿ ಪಡೆದಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 'ನಾವು ನಿರೀಕ್ಷಿಸದ ಘಟನೆ ನಡೆಯಿತು ಅಕಾಡೆಮಿಯ ನಡವಳಿಕೆಯ ಮಾನದಂಡಗಳ ಉಲ್ಲಂಘನೆಗಾಗಿ ಸ್ಮಿತ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುತ್ತಿರುವುದಾಗಿ" ಅಕಾಡೆಮಿ ಪ್ರಕಟಿಸಿದೆ.